Friday 10 August 2018

ಅವನು-ಅವಳು: ಗುರುತು


#filch-fiction
---
ನೀನು ಸರಿ ಇಲ್ಲಾ... ಬೆಡ್‌ರೂಂನಿಂದ ಅಪ್ಪಳಿಸಿದ ಅವಳ ಧ್ವನಿಯಲ್ಲಿ ಕೋಪವಿತ್ತು.
ಥ್ಯಾಂಕ್ಸ್... ಆದ್ರೆ ಇವಾಗ ಈ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಟ್ಟಿದ್ದು ಯಾಕೆ ಅಂಥಾ ಗೊತ್ತಾಗ್ತಿಲ್ಲ - ಅವನ ಉತ್ತರದಲ್ಲಿದ್ದುದು ಕೆಣಕುವ ತುಂಟತನ. ಅಷ್ಟರಲ್ಲೇ ತೂರಿಬಂದ ತಲೆದಿಂಬು ಅವನ ಮುಖದ ಮೇಲೆ ಅಪ್ಪಳಿಸಿತು.
ಬೆಡ್‌ರೂಂನಿಂದ ಗುಡುಗಿನ ಸದ್ದು ಕೇಳಿದಾಗ್ಲೇ ಈ ಥರ ಆಲಿಕಲ್ಲು ಬಂದು ಬಡಿಯುತ್ತೆ ಅಂತಾ ಗೆಸ್ ಮಾಡ್ಬೇಕಾಗಿತ್ತು. ಮಿಸ್ಸಾಗೋಯ್ತು. ಇರ‍್ಲಿ... - ಅವನು ಮತ್ತೆ ಕೆಣಕಿ ಕೆಳಗೆ ಬಿದ್ದ ದಿಂಬನ್ನು ಎತ್ತಿಕೊಂಡ. ದಿಂಬಿನ ತುಂಬಾ ಅವಳ ಕೂದಲ ಘಮ. ಬೇಡವೆಂದರೂ ಆಘ್ರಾಣಿಸಿದ ಮೂಗಿಗೆ ಹಿಡಿಶಾಪ ಹಾಕುತ್ತಲೇ ದಿಂಬನ್ನೆತ್ತಿದ ಅವನಿಗೋ ಅವಳನ್ನೇ ಅಪ್ಪಿದ ಅನುಭೂತಿ. ಕುಳಿತಿದ್ದ ಚೇರ್‌ನಲ್ಲಿ ಹಾಗೇ ಹಿಂದಕ್ಕೆ ವಾಲಿದ ಅವನ ಕಣ್ಣುಗಳು ಅದೇನನ್ನೊ ನೆನಪಿಸಿಕೊಂಡು ತಾವಾಗಿಯೇ ಮುಚ್ಚಿಕೊಂಡವು. ಮುಖದಲ್ಲಿ ತುಂಟ ನಗು.
ಆಲಿಕಲ್ಲು ಬಿದ್ದಿದ್ದೇನೋ ಸರಿ. ಆದ್ರೆ ಇಷ್ಟೊತ್ತಿಗೆ ಮಳೆನೂ ಬರಬೇಕಿತ್ತಲ್ಲಾ? - ಗೊಣಗುತ್ತಾ ಅವನು ಕಣ್ಣು ತೆರೆಯುವ ಮೊದಲೇ ಮಲ್ಲಿಗೆಯ ಬುಟ್ಟಿ ಮೈ ಮೇಲೆ ಬಿದ್ದ ಹಾಗಾಯ್ತು. ಅವಳ ಧಾಳಿ ಆರಂಭವಾಗಿತ್ತು.
ಸಾವರಿಸಿಕೊಂಡು ಕಣ್ಣು ತೆರೆದರೆ ಕಂಡಿದ್ದು ಮಿನುಗುತ್ತಿದ್ದ ಕಣ್ಣುಗಳು. ಅವಳ ಹಣೆ ಅವನ ಹಣೆಯೊಂದಿಗೆ ಯುದ್ದಕ್ಕಿಳಿದಿತ್ತು. ಅವನ ಮೇಲೆ ಮಗುವಿನಂತೆ ಕುಳಿತಿದ್ದ ಅವಳ ಕೈಗಳು ಅದಾಗಲೇ ಅವನ ಕೂದಲನ್ನು ಹಿಡಿದೆಳೆಯುತ್ತಿದ್ದವು. ಮುಖದ ಸುತ್ತಲೂ ಹರಡಿದ್ದ ಅವಳ ಕೂದಲಿನಿಂದ ನೀರು ತೊಟ್ಟಿಕ್ಕುತ್ತಿತ್ತು.
ಓಹ್... ಮಳೆ ಬಂತು - ಸ್ವಗತದೊಂದಿಗೆ ತೋಳಿಲ್ಲದ ಟಾಪ್‌ನಲ್ಲಿದ್ದ ಅವಳ ಒದ್ದೆಗೂದಲನ್ನು ಬದಿಗೆ ಸರಿಸಿ, ಆಕೆಯ ಮೃದು ಕೆನ್ನೆಯನ್ನು ಬೊಗಸೆಯಲ್ಲಿ ತುಂಬಿಕೊಂಡ. ಆಗಷ್ಟೆ ಮಿಂದ ಅವಳ ಕೂದಲಿನಿಂದ ಜಿನುಗುತ್ತಿದ್ದ ನೀರ ಹನಿಗಳು ಶರ್ಟ್‌ನೊಳಗೆ ಹುದುಗಿ ಅವನೆದೆಯನ್ನು ನೆನೆಸುತ್ತಿದ್ದವು. ದೇಹಕ್ಕೆ ಮಂಜಿನ ಹನಿಯನ್ನು ಸ್ಪರ್ಶಿಸಿದ ಅನುಭವ. ಅವಳು ಕೊಸರಾಡುತ್ತಿದ್ದಳು.
ಸ್ನಾನ ಆದ ಮೇಲೆ ಕೂದಲನ್ನು ಹೀಗೂ ಒರೆಸಬಹುದು ಅಂತಾ ಗೊತ್ತೆ ಇರ‍್ಲಿಲ್ಲ ನೋಡು. ನಾಳೆಯಿಂದ ನಾನೂ ಇದನ್ನ ಟ್ರೈ ಮಾಡ್ತೀನಿ... - ಅವನು ಮತ್ತೆ ಕೆಣಕಿ, ಹತ್ತಿರ ಸೆಳೆದ. ಅವಳ ಘಮ ಮತ್ತಷ್ಟು ಹೆಚ್ಚಾಯ್ತು. ಜೊತೆಗೆ ಕೋಪವೂ...
ಬಿಡು ನನ್ನ... ಐ ಹೇಟ್ ಯೂ. ಯಾವಾಗ್ಲೂ ಹೀಗೆ ನೀನು... ಈಡಿಯಟ್ ಎಂದ ಅವಳು ಬಿಡಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದಳು.
ಆಯ್ತಪ್ಪಾ... ಕೋಪ ಬಂದಿದೆ ಅಂತಾ ಗೊತ್ತಾಯ್ತು. ಆದ್ರೆ ಯಾಕೆ ಅಂತಾನೂ ಗೊತ್ತಾದ್ರೆ ಒಳ್ಳೇದು. ಸ್ಸಾರಿ ಕೇಳೋಕೆ ಈಸಿ ಆಗುತ್ತೆ ನೋಡು. ಹೇಳ್ಬಿಡು... ಬೇಗ ಸ್ಸಾರಿ ಕೇಳಿ ಬಿಡ್ತಿನೀ - ಅವನ ಬೊಗಸೆಯಲ್ಲಿ ಅಡಗಿದ್ದ ಅವಳ ಮುಖ ಕೆಂಪು ಚಂದಿರನಂತೆ ಭಾಸವಾಯ್ತು.
ಥೂ... ನಂಗೆ ಸ್ಸಾರಿ ಬೇಡ. ನಾ ಹೇಳಿದ್ದು ಕೇಳೋದೆ ಇಲ್ಲಾ... ಬೇಡ ಅಂದಿದ್ದನ್ನೇ ಮಾಡ್ತೀಯಾ? ಇವತ್ತು ನಾನು ಫಂಕ್ಷನ್‌ಗೆ ಹೋಗೋಕೆ ಆಗೊಲ್ಲ. ಎಲ್ಲಾ ನಿನ್ನಿಂದ. ಐ ಹೇಟ್ ಯೂ. ಕೋಪಕ್ಕಿಂತ ಹೆಚ್ಚಾಗಿ ನಿರಾಸೆಯ ಛಾಯೆ ಅವಳ ಮೊಗದಲ್ಲಿತ್ತು.
ನಿನ್ನ ಬೆಸ್ಟೀ ಬರ್ತ್‌ಡೇ ಪಾರ್ಟಿ ತಾನೇ... ಅದು ಇರೋದು ಸಂಜೆ. ನೆಂಪಿದೆ ನಂಗೆ. ಸಂಜೆ ನಾವು ಸ್ಪೈಸ್ ಡೆಕ್ನಲ್ಲಿರೋ ಪಾರ್ಟಿಗೆ ಹೋಗೋಕಿದೆ. ಅದಿಕ್ಕೆ ತಾನೇ ನಾನು ಯಾವ ಪ್ರೋಗ್ರಾಂ ಹಾಕ್ಕೊಳ್ಳದೆ ಮನೆಲಿರೋದು ಇವತ್ತು’. ಅವನ ಉತ್ತರಕ್ಕೆ ಅವಳು ತೃಪ್ತಳಾದಂತೆ ಕಾಣಲಿಲ್ಲ.
ಪಾರ್ಟಿ ಇರೋದು ಸಂಜೇನೆ. ಆದ್ರೂ ಹೋಗೋಕಾಗೊಲ್ಲ. ಎಲ್ಲಾ ನಿನ್ನಿಂದ. ನಿಂದೇ ತಪ್ಪು. ಅವಳ ಆದೇಶಪೂರ್ವಕ ಧ್ವನಿಗೆ ಅವನು ಶರಣಾಗಲೇ ಬೇಕಾಯ್ತು.
ಆಯ್ತು... ನನ್ನಿಂದ ತಪ್ಪಾಗಿದೆ. ಆದ್ರೆ ಯಾವ ತಪ್ಪು ಅಂತಾ ಗೊತ್ತಾಗ್ತಿಲ್ಲ. ಏನಾಯ್ತು ಅಂತಾ ಹೇಳಿದ್ರೆ ತಪ್ಪು ಸರಿ ಮಾಡ್ಕೋಬಹುದು. ಹೇಳಿಬಿಡು - ಅವನ ಮಾತಿನಲ್ಲಿ ಮತ್ತಷ್ಟು ತುಂಟತನ ಇದ್ದಂತೆ ಅವಳಿಗನಿಸಿತು.
ಸಿಟ್ಟಿನಿಂದಲೇ ಅವನ ತಲೆಗೆ ಮೊಟಕಿ, ಅವನ ಹಿಡಿತದಿಂದ ಬಿಡಿಸಿಕೊಂಡಳು ಅವಳು, ಏನು ಸರಿ ಮಾಡೋದು ನಿನ್ನ ತಲೆ. ಇವತ್ತು ಫಂಕ್ಷನ್‌ಗೆ ಬ್ಯಾಕ್‌ಲೆಸ್ ಗೌನ್ ಹಾಕ್ಕೋಬೇಕು, ಅಪ್‌ಡೂ ಹೇರ್‌ಸ್ಟೈಲ್ ಮಾಡ್ಕೋಬೇಕು ಅಂತಿದ್ದೆ. ಈಗ ನೋಡು. ನೀನು ಮಾಡಿರೋ ಕೆಲ್ಸ ಅಂದು ಕೂತಲ್ಲೇ ತಿರುಗಿದಳು. ತಲೆಯ ಮೇಲಿಂದ ಹಾದು ಬಂದ ಅವಳ ತೋರುಬೆರಳು ಕತ್ತಿನಿಂದ ಕೊಂಚ ಕೆಳಗೆ ಏನನ್ನೋ ಸೂಚಿಸುತ್ತಿದ್ದವು.
ಏನು ಮಾಡಿದೆ? ಅನ್ನುವ ಕುತೂಹಲದಿಂದಲೇ ಅವಳ ಬೆನ್ನತ್ತ ನೋಡಿದ ಅವನಿಗೆ ಅಲ್ಲಿ ಕಂಡಿದ್ದು ಸಣ್ಣ ಗುರುತು. ಬೆಳದಿಂಗಳ ಬಣ್ಣದ ಅವಳ ಕತ್ತಿನಿಂದ ಕೊಂಚ ಕೆಳಗೆ ಮೂಡಿದ್ದ ಕೆಂಪನೆಯ ಗುರುತು ಚಂದಿರನ ಮೇಲಿನ ಮಚ್ಚೆಯಂತೆ ಸ್ಪುಟವಾಗಿತ್ತು. ಆ ಗುರುತು ಮೂಡಿದ್ದರ ಹಿಂದಿನ ಘಟನೆ ನೆನಪಾಯ್ತು. ಅವನಿಗೂ ನಗು-ನಾಚಿಕೆ ಒತ್ತರಿಸಿಕೊಂಡು ಬಂತು. ಪೆಚ್ಚು ಮೊಗದ ಹುಡುಗಿ ಮತ್ತಷ್ಟು ಮುದ್ದಾಗಿ ಕಂಡಳು.
ನಗ್ಬೇಡಾ ನೀನು. ಈ ಮಾರ್ಕ್ ಇಟ್ಕೊಂಡು ಬ್ಯಾಕ್‌ಲೆಸ್ ಗೌನ್ ಹಾಕ್ಕೋಳೋಕ್ಕಾಗೊಲ್ಲ. ಅಪ್‌ಡೂ ಹೇರ್‌ಸ್ಟ್ರೈಲ್ ಹೇಗೆ ಮಾಡ್ಕೋಳ್ಳಿ? ಎಲ್ರೂ ಟೀಸ್ ಮಾಡ್ತಾರೆ. ಎಷ್ಟು ಆಸೆಯಿಂದ ಇವತ್ತಿಗೆ ಅಂತಾ ತೆಗೆದಿಟ್ಟಿದ್ದೆ ಗೊತ್ತಾ ಎಲ್ಲಾ ಹಾಳಾಯ್ತು. ನಿನ್ನಿಂದ... - ಅವಳ ಕಣ್ಣುಗಳಲ್ಲಿ ಅಸಹಾಯಕತೆಯೊಂದಿಗೆ ಸಣ್ಣ ಬೇಸರವೂ ಇಣುಕುತ್ತಿತ್ತು. ಹೃದಯ ಹಿಂಡಿದ ಅನುಭವ ಇವನಿಗೆ. ಕೂಡಲೇ ಸಾವರಿಸಿಕೊಂಡು ಆ ಗುರುತನ್ನೇ ದಿಟ್ಟಿಸಿ ನೋಡಿದ. ಅವನ ತಲೆಯೊಳಗೆ ನಕ್ಷತ್ರ ಮಿನುಗಿತು.
ನೀ ಹೀಗೆಲ್ಲಾ ಬೇಸರ ಮಾಡ್ಕೊಂಡ್ರೆ ನಂಗೆ ಕಷ್ಟ ಆಗುತ್ತೆ. ನೀನು ಆ ಗೌನ್ ಹಾಕ್ಕೋಬಹುದು, ಅಪ್‌ಡೂ ಹೇರ್ ಕೂಡ ಮಾಡ್ಕೋಬಹುದು. ಮಾರ್ಕ್ ಕಾಣೋಲ್ಲ - ಅವನದ್ದು ವಿಶ್ವಾಸದ ನುಡಿ. ಜಗತ್ತನ್ನೇ ಉಳಿಸುವ ಸಂಶೋಧನೆ ಮಾಡಿದ ಹೆಮ್ಮೆ.
ಹೇಗೆ? ಅವಳ ಧ್ವನಿ ಮೃದುವಾಗಿತ್ತು. ಪ್ರಾಯಶಃ ಅವಳೂ ಆ ಗುರುತಿನ ಹಿಂದಿನ ಘಟನೆ ನೆನಪಿಸಿಕೊಂಡ ಸೂಚನೆ ಅದು.
ಅವನು ಏನೂ ಮಾತನಾಡದೆ ಅವಳನ್ನು ಬದಿಗೆ ಸರಿಸಿ ಪಕ್ಕದ ಟೇಬಲ್‌ನಲ್ಲಿದ್ದ ಪೆನ್‌ಸ್ಟ್ಯಾಂಡ್‌ನತ್ತ ನಡೆದ. ರೆಡ್ ಇಂಕ್‌ನ ಪೆನ್ ತಂದು ಕುತೂಹಲದಿಂದ ಇವನನ್ನೇ ನೋಡುತ್ತಿದ್ದ ಅವಳ ಪಕ್ಕ ಕುಳಿತು, ಮಿನುಗುವ ಬೆನ್ನಿನ ಮೇಲಿದ್ದ ಆ ಗುರುತಿನ ಮೇಲೆ ಏನೋ ಗೀಚಲಾರಂಭಿಸಿದ. ಪೆನ್‌ನ ನಿಬ್ ಅವಳನ್ನು ಕೆಣಕುತ್ತಿತ್ತು. ತಣ್ಣಗಿನ ನಿಬ್ ಕತ್ತಿನ ಬಳಿ ಹರಿದಾಡುತ್ತಿದ್ದಂತೆ ಅವಳೆದೆಯಲ್ಲಿ ಪುಳಕ. ಮೊಗದಲ್ಲಿ ನಗು, ನಾಚಿಕೆ ಎರಡೂ ಮೇಳೈಸುತ್ತಿತ್ತು.
ಏನು ಮಾಡ್ತಿದ್ದೀ? ಎಂದು ಕೇಳಬೇಕೆಂದೆನಿಸಲಿಲ್ಲ ಅವಳಿಗೆ. ಹಿತವಾಗಿತ್ತು. ಎಲ್ಲೋ ಕಳೆದು ಹೋಗುವ ಹಂತದಲ್ಲಿದ್ದ ಅವಳನ್ನು ಎಚ್ಚರಿಸಿದ್ದು ಅವನ ಧ್ವನಿ.
ಏಳು... - ಅವನು ಅವಳನ್ನು ನಿಧಾನಕ್ಕೆ ಎತ್ತಿಕೊಂಡು ಬೆಡ್‌ರೂಂನಲ್ಲಿದ್ದ ಡ್ರೆಸ್ಸಿಂಗ್ ಟೇಬಲ್ ಬಳಿ ತಂದು ನಿಲ್ಲಿಸಿದ.
ಇರು ಬಂದೆ... ಎಂದವನು ಹೊರಹೋಗಿ ಮತ್ತೆ ಹಿಂದಿರುವಾಗ ಅವನ ಕೈಯಲ್ಲಿ ಸಣ್ಣದೊಂದು ಕನ್ನಡಿ. ಅವಳ ಬೆನ್ನ ಹಿಂದೆ ಅವನು ಹಿಡಿದ ಕನ್ನಡಿಯಲ್ಲಿ ಕತ್ತಿನ ಕೆಳಗೆ ಮೂಡಿದ ಹೊಸ ಗುರುತಿನ ಪ್ರತಿಬಿಂಬವಿತ್ತು. ಎರಡು ಸಣ್ಣ ಮಿಡಿವ ಹೃದಯಗಳ ಟ್ಯಾಟೋನಂತಹ ಗುರುತು. ಮೊದಲಿನ ಗುರುತಿನ ಮೇಲೆ ಮೂಡಿದ್ದ ಈ ಹೃದಯಗಳ ಚಿತ್ರ ಅವಳ ಬೆನ್ನಿನ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು. ಬೆಳದಿಂಗಳಿಗೆ ದೃಷ್ಟಿ ಬೊಟ್ಟು ಇಟ್ಟ ಹಾಗೆ.
ಈಗ ಗೌನ್ ಹಾಕ್ಕೋಬಹುದು ಎಂದ ಅವನು ಕನ್ನಡಿಯನ್ನು ಪಕ್ಕಕ್ಕಿಟ್ಟು ಅವಳನ್ನು ಬಳಸಿದ. ನಿಧಾನಕ್ಕೆ ಬಾಗಿ ತಾನೇ ಮೂಡಿಸಿದ್ದ ಹೃದಯದ ಟ್ಯಾಟೋ ಮೇಲೆ ಮೆತ್ತನೆ ಮುತ್ತಿಟ್ಟ. ಅವಳು ನಾಚಿದಳು. ಕೋಪ ಕರಗಿತ್ತು. ಬೆಡ್‌ರೂಮಿನ ಡ್ರೆಸ್ಸಿಂಗ್ ಟೇಬಲ್‌ನ ಕನ್ನಡಿಯ ಮುಂದಿನಿಂದ ಅವರಿಬ್ಬರ ಬಿಂಬವೂ ನಿಧಾನಕ್ಕೆ ಮರೆಯಾಯಿತು.
ಇತ್ತ ಹಾಲ್‌ನಲ್ಲಿ ಅವನು ಬಿಟ್ಟಿದ್ದ ಪೆನ್ನಿನ ನಿಬ್ ಮತ್ತಷ್ಟು ಹೊಸ ಚಿತ್ರ ಬರೆಯುವ ಹುಮ್ಮಸ್ಸಿನಿಂದ ತಣ್ಣನೆ ಮಲಗಿತ್ತು...
###
#filchfiction #secondpage #fantacy #abstractstories

No comments:

Post a Comment