Wednesday 6 May 2009

ಆಹಾ ಎಂಥಾ ಆ ಕ್ಷಣ...

"ಸ್ಸಾರಿ... ನಂಗೆ ನಿಜವಾಗ್ಲೂ ತುಂಬಾ ಕೆಲಸ ಇದೆ. ಇವತ್ತು ನಿಂಜೊತೆ ಡಿನ್ನರ್‌ಗೆ ಬರೋಕಾಗೊಲ್ಲ..." ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಮೊಬೈಲ್ ಕೆಳಗಿಟ್ಟೆ. ಆಕೆಗೆ ಖಂಡಿತವಾಗಿಯೂ ಬೇಜಾರಾಗಿರುತ್ತೆ ಅನ್ನೋದು ನಂಗೂ ಗೊತ್ತಿತ್ತು. ಆ ಬಗ್ಗೆ ಹೆಚ್ಚು ಯೊಚಿಸಲಿಲ್ಲ. ಸುಮ್ಮನೆ ಕೀ ಬೋರ್ಡ್ ಕುಟ್ಟುತ್ತಾ ಕುಳಿತೆ. ದೃಷ್ಟಿ ಮಾನಿಟರ್‌ನತ್ತ ನೆಟ್ಟಿದ್ದರೂ, ಯೋಚನೆಗಳೆಲ್ಲಾ ಸೃಷ್ಟಿಯ ಸುತ್ತಲೇ ಸುತ್ತುತ್ತಿದ್ದವು. ಖಂಡಿತಾ ಆಕೆ ಮತ್ತೆ ಫೋನ್ ಮಾಡುತ್ತಾಳೆ... ಪುನಃ ನೆಪ ಹೇಳುವ ಮನಸ್ಸಿರಲಿಲ್ಲ...
+++
ಸೃಷ್ಟಿ ನನ್ನಲ್ಲಿ ಇಷ್ಟಲ್ಲಾ ಹೋಯ್ದಾಟಗಳನ್ನು ಸೃಷ್ಟಿಸುತ್ತಾಳೆಂದು ನಾನೆಸಿರಲಿಲ್ಲ. ಇದುವರೆಗೂ ನಾನು ಆಕೆಯಿಂದ ಒಂದೇ ಒಂದು ವಿಷಯವನ್ನು ಮರೆಮಾಚಿದವನಲ್ಲ. ನನ್ನ ಗುಣ-ಅವಗುಣಗಳೆರಡನ್ನೂ ಸಮಾನವಾಗಿ ಸ್ವೀಕರಿಸಿದ್ದ ಸ್ನೇಹಿತೆ ಆಕೆ. ಛೆ... ಮತ್ತೆ ಗೊಂದಲ. ಆಕೆ ನಿಜವಾಗಿಯೂ ನನ್ನ ಸ್ನೇಹಿತೆಯಷ್ಟೇ ಆಗಿದ್ದಳೆ. ಹೌದು... ನಮ್ಮಿಬ್ಬರ ನಡುವೆ ಬೇರೇನೂ ಇರಲಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಪ್ರಾಯಶಃ ಈಗ ನಾನೂ ನಂಬುವುದಿಲ್ಲ.
ಮೊದಲಾದರೆ, "ಎಲ್ಲಿ... ನಿನ್ನ ಪ್ರೇಯಸಿ ಇನ್ನೂ ಬಂದೇ ಇಲ್ಲವಲ್ಲಾ..." ಎಂದು ಮದನ್ ಹೇಳಿದಾಗ, ಅಥವಾ "ಏನು ಹರಿ... ಬರೀ ಹುಡುಗಿ ಜೊತೆ ಸುತ್ತೋದು ಮಾತ್ರಾನೋ ಅಥವಾ ಮದುವೆ ಊಟಾನೂ ಹಾಕಿಸ್ತಿಯೋ..." ಎಂದು ಪ್ರಶಾಂತ್ ಕುಹಕವಾಡಿದಾಗ ನನಗೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಆದರೆ ಸೃಷ್ಟಿಯೇ, ಅದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಸಮಾಧಾನ ಮಾಡುತ್ತಿದ್ದಳು. ಆದರೆ ಒಂದು ಬಾರಿಯಂತೂ ಮದನ್ ಮಿತಿಮೀರಿ ಕೀಟಲೆ ಮಾಡಿದಾಗ ಅವಳೇ, "ಹೌದು. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಮದುವೆಯೂ ಮಾಡಿಕೊಳ್ಳುತ್ತೇವೆ. ಏನಿವಾಗ?" ಎಂದು ಅವನನ್ನು ದಬಾಯಿಸಿದ್ದಳು. ಯಾವಾಗಲೂ ಶಾಂತವಾಗಿರುತ್ತಿದ್ದ ಸೃಷ್ಟಿ ಅಂದು ಧನಿಯೇರಿಸಿ ಮದನ್‌ಗೆ ಬೈದು ಆತನ ಬಾಯಿ ಮುಚ್ಚಿಸಿದ್ದು ಕಂಡು ನನಗಂತೂ ಅಚ್ಚರಿಯಾಗಿತ್ತು. ಆದರೆ ಅಂದೇ ಸಲ್ಲದ ಯೋಚನೆಯೊಂದು ನನ್ನನ್ನು ಕಾಡಿತ್ತು. ಹಾಗಾದರೆ ಆ ಭಾವನೆ ಆಕೆಯಲ್ಲಿ ಇದ್ದಿದ್ದು ನಿಜವೇ?
ಈ ಅನುಮಾನವನ್ನು ಪರಿಹರಿಸಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. "ಸೃಷ್ಟಿ... ನಿನ್ನ ಮನಸ್ಸಲ್ಲಿ ನಿಜಕ್ಕೂ ಆ ರೀತಿಯ ಯೋಚನೆ ಇದೆಯೇ?" ಎಂದು ನೇರವಾಗಿ ಕೇಳಿಯೇ ಬಿಟ್ಟೆ.
ಆದರೆ ನಾನು ಊಹಿಸಿದಂತೆ ಸೃಷ್ಟಿ ತಬ್ಬಿಬ್ಬಾಗಲಿಲ್ಲ, ಕೋಪಗೊಳ್ಳಲಿಲ್ಲ ಅಥವಾ ಹೌದು ಎಂದು ಹೇಳಿ ನಾಚಿಕೆಯಿಂದ ನೆಲ ನೋಡುತ್ತಲೂ ನಿಲ್ಲಲಿಲ್ಲ.
"ಹರಿ... ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ" ಎಂದಷ್ಟೇ ಹೇಳಿ ಅಲ್ಲಿಂದ ಹೊರಟುಹೋದಳು.
ಅಂದಿನಿಂದ ನನಗರಿವಿಲ್ಲದಂತೆ ಸೃಷ್ಟಿಯೊಡನಿದ್ದ ಸಲುಗೆ ಕೊಂಚ ಮರೆಯಾಯ್ತು. ಆಕೆಯೊಡಗಿನ ಮಾತುಗಳಲ್ಲಿ ಕೊಂಚ ಬಿಗು ಕಾಣಿಸಿಕೊಳ್ಳತೊಡಗಿತು. ಇದನ್ನು ಯಾರು ಗಮನಿಸಿದರೋ, ಬಿಟ್ಟರೋ ಗೊತ್ತಿಲ್ಲ. ಆದರೆ ಸೃಷ್ಟಿ... ಇದು ಆಕೆಯ ಗಮನಕ್ಕೆ ಬಾರದಿರುತ್ತದೆಯೇ...
+++
ತ್ತೆ ಮೊಬೈಲ್ ಅರಚತೊಡಗಿತು. ಆಕೆಯೇ... ಬೇರೆ ದಾರಿ ಇರಲಿಲ್ಲ.
"ಹೇಳು ಸೃಷ್ಟಿ..." ಎಂದೆ.
"ಹರಿ... ದಯವಿಟ್ಟು ಅವಾಯ್ಡ್ ಮಾಡಬೇಡ. ನಾನು ನಿಂಜೊತೆ ಮಾತಾಡ್ಲೇಬೇಕು" ಎಂದ ಸೃಷ್ಟಿಗೆ ಇಲ್ಲ ಎನ್ನಲಾಗಲಿಲ್ಲ.
"ಸರಿ... ಸಂಜೆ ವೆಸ್ಟ್ ಎಂಡ್ ಬಳಿ ಸಿಗುತ್ತೇನೆ" ಎಂದಾಗ ಸೃಷ್ಟಿ ನಿಟ್ಟುಸಿರು ಬಿಟ್ಟಿದ್ದು ಕೇಳಿಸಿತು.
ಇಷ್ಟಾದ ಮೇಲೆ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗಲಿಲ್ಲ. ಸೃಷ್ಟಿ ಏನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಎಂದು ಯೋಚಿಸತೊಡಗಿದೆ. ಅರ್ಥವಾಗಲಿಲ್ಲ... ಅಥವಾ ನಾನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ.
+++
ಸಂಜೆ ವೆಸ್ಟ್ ಎಂಡ್‌ಗೆ ಕಾಲಿಟ್ಟಾಗ, ಆ ಬೀಚ್ ರೆಸಾರ್ಟ್ ತನ್ನ ಎಂದಿನ ಜೋಶ್‌ನಲ್ಲಿತ್ತು. ಈ ಮೊದಲು ಸೃಷ್ಟಿಯೊಂದಿಗೆ ಅನೇಕ ಬಾರಿ ಇಲ್ಲಿಗೆ ಬಂದಿದ್ದರೂ, ಇಂದೇಕೊ ಆ ವಾತಾವರಣ ವಿಚಿತ್ರವಾಗಿ ಕಂಡಿತು. ಅಲ್ಲೇ ಕೊಂಚ ದೂರದಲ್ಲಿ ಕುಳಿತಿದ್ದ ಸೃಷ್ಟಿ ನನ್ನತ್ತಲೇ ನೋಡುತ್ತಿದ್ದಳು... ಆಕೆಯ ಸನಿಹ ಹೋಗುತ್ತಿದ್ದಂತೆಯೇ ಎದ್ದು ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ ನಿಂತ ಸೃಷ್ಟಿ ನನ್ನೊಳಗೆ ಯಾವುದೋ ಆತಂಕ ಹುಟ್ಟುಹಾಕತೊಡಗಿದಳು.
"ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ ಹರಿ... ನಿನ್ನ ಮಾತು, ವರ್ತನೆ ಎಲ್ಲವೂ ಬದಲಾಗುತ್ತಿದೆ..."
"ಹಾಗೇನೂ ಇಲ್ಲಾ. ಅದು...' ಎಂದು ಸಮರ್ಥಿಸಲು ಹೊರಟ ನನ್ನ ಮಾತುಗಳನ್ನು ಅರ್ಧದಲ್ಲೇ ತಡೆದು, "ಕಾರಣ ಬೇಕಿಲ್ಲ ಹರಿ. ಅದನ್ನೂ ಅರ್ಥಮಾಡಿಕೊಳ್ಳದಷ್ಟು ದಡ್ಡಿಯಲ್ಲ ನಾನು. ಆದರೆ ಒಂದು ತಿಳಿದುಕೋ... ನಮ್ಮಲ್ಲಿ ಹುಟ್ಟುವ ಎಲ್ಲಾ ಭಾವನೆಗಳಿಗೂ ಕಾರಣ ಹುಡುಕಲು ಸಾಧ್ಯವಿಲ್ಲ. ಹುಡುಕಲೂ ಬಾರದು... ನಿನಗೆ ಆತ್ಮೀಯವಾಗಿರುವ ವ್ಯಕ್ತಿಗಳೊಂದಿಗಿರುವಾಗ ನಿನಗೆ ಸಿಗುವ ಅನುಭೂತಿಗೆ ಕಾರಣ ಹುಡುಕುತ್ತಾ ಹೊರಟರೆ ನೀನು ನೆಮ್ಮದಿ ಕಳೆದುಕೊಳ್ಳುತ್ತೀಯೇ ಹೊರತು, ಕಾರಣ ಕಂಡುಕೊಳ್ಳುವುದಿಲ್ಲ" ಎಂದ ಸೃಷ್ಟಿಯ ಮಾತುಗಳು ನನಗ್ಯಾಕೋ ತೀರಾ ಅಪರಿಚಿತವೆನೆಸಿತು.
"ನಿನ್ನ ಜೊತೆ ಇರುವಾಗ ಯಾಕೋ ನಿರಾಳವಾಗಿರುತ್ತೇನೆ. ಏನೋ ಒಂದು ಅವ್ಯಕ್ತ ಖುಷಿ ಸಿಗುತ್ತದೆ. ಆದರೆ, ಅಂತಹ ಭಾವಗಳನ್ನು ಆ ಕ್ಷಣದಲ್ಲಷ್ಟೇ ಅನುಭವಿಸಿ ಸುಮ್ಮನಿದ್ದು ಬಿಡಬೇಕು ಹರಿ. ಆಗಷ್ಟೇ ಅವು ಮಧುರವಾಗುಳಿಯುತ್ತವೆ. ಒಂದು ಸಂಬಂಧವನ್ನು ತೀರಾ ಗೋಜಲಾಗಿಸಿದರೆ, ನಿನ್ನ ಗೊಂದಲಗಳಿಗೆ ಆ ಸಂಬಂಧವೇ ಬಲಿಯಾಗುತ್ತದೆ... ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಡಬೇಡ..." ಎಂದು ಹೇಳಿ ನನ್ನ ತಲೆ ನೇವರಿಸಿ, ಹಣೆಯನ್ನು ಮೃದುವಾಗಿ ಚುಂಬಿಸಿದ ಸೃಷ್ಟಿ ತನ್ನ ಕಾರಿನತ್ತ ಹೆಜ್ಜೆ ಹಾಕಲಾರಂಭಿಸಿದಳು.
ಸ್ವಲ್ಪ ದೂರ ಸಾಗಿದ ನಂತರ ನನ್ನತ್ತ ತಿರುಗಿ, "ಹರಿ... ಈ ಮುತ್ತಿಗೂ ಕಾರಣ ಹುಡುಕುತ್ತಾ ಕೂರಬೇಡ" ಎಂದು ಕಣ್ಣಲ್ಲೇ ತುಂಟ ನಗು ಸೂಸಿ ಹೊರಟುಹೋದಳು. ಆಕೆ ಹೋದೆಡೆಗೆ ನೋಡುತ್ತಾ ನಿಂತೆ. ಆ ವೇಳೆ ಸೃಷ್ಟಿಯ ನಗು ತೀರಾ ಹಿತವೆನೆಸಿತು. ಆದರೆ ಯಾಕೋ ಆ ನಗುವಿಗೆ ಹಾಗೂ ಅದು ನನ್ನಲ್ಲಿ ಸೃಷ್ಟಿಸಿದ ಹಿತಕರ ಭಾವಕ್ಕೆ ಕಾರಣ ಹುಡುಕಬೇಕೆಂದು ಅನಿಸಲಿಲ್ಲ...