Thursday, 18 December 2008

ಒದ್ದೆ ಮರಳಿನ ಮೇಲೆ...


ನುರ್ಮಾಸದ ಚಳಿ ತಣ್ಣಗೆ ಮೈಕೊರೆಯುತ್ತಿತ್ತು. ಮೈಮೇಲೆ ಹೊದ್ದಿದ್ದ ಬ್ಲಾಂಕೆಟ್ ಚಳಿಗೆ ಶರಣಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದವು. ಆದರೆ ದೇಹವನ್ನು ಕೊರೆಯುತ್ತಿದ್ದ ಚಳಿಯಿಂದ ತಪ್ಪಿಸಿಕೊಳ್ಳಲು ಮೈಬೆಚ್ಚಗಿರಿಸಿಕೊಳ್ಳುವ ಗೊಡವೆ ಬೇಡವೆನಿಸಿತ್ತು. ಅಲ್ಲೇ... ಹಾಸಿಗೆಯ ಸನಿಹವೇ ಬಿದ್ದಿದ್ದ ಮೊಬೈಲ್‌ನಿಂದ ಹೊರಡುವ ಒಂದು ಸಣ್ಣ ಸದ್ದಿಗಾಗಿ ಮೈಯನ್ನೆಲ್ಲಾ ಕಿವಿಯಾಗಿಸಿಕೊಂಡು ಕಾಯುತ್ತಿದ್ದೆ. ಆದರೆ ಅದೂ ನನ್ನಂತೆಯೆ ನೀರವ ಮೌನದ ರಾತ್ರಿಯಲ್ಲಿ ಕಳೆದುಹೋಗಿತ್ತು.
***
ನೋ ಅಸ್ಪಷ್ಟ ಸದ್ದು... ಆಗಷ್ಟೆ ನಿದ್ರಾದೇವಿಯ ಅದರಾಮೃತವನ್ನು ಸವಿಯುತ್ತಿದ್ದ ರೆಪ್ಪೆಗಳನ್ನು ಒಲ್ಲದ ಮನಸ್ಸಿನಿಂದ ತೆರೆದಾಗ ಮೊಬೈಲ್ ಕಣ್ಣಿಗೆ ಬಿತ್ತು. ಅದರ ಪರದೆಯ ಮೇಲೆ ಮಿಂಚುತ್ತಿದ್ದ ಹೆಸರನ್ನು ನೋಡಿದೊಡನೆಯೇ ನಿದ್ರಾ ನಶೆ ಇಳಿದುಹೋಗಿತ್ತು. 'ಸಾಕ್ಷಿ...' ರಿಸೀವ್ ಬಟನ್ ಅದುಮುವ ಮುನ್ನ ಆ ಹೆಸರನ್ನೊಮ್ಮೆ ಮೆಲುವಾಗಿ ಮುದ್ದಿಸಿದೆ. ಹಲೋ ಎಂದೊಡನೆಯೇ, "ನಿನ್ನ ಜೊತೆ ಮಾತನಾಡಬೇಕಿದೆ. ಸಾಯಂಕಾಲ ಬೀಚ್ ಬಳಿ ಸಿಕ್ತಿಯಾ?" ಎಂದವಳಿಗೆ ಸರಿ ಎಂದೆ. ಇನ್ನೇನೋ ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಫೋನ್ ಕಟ್ ಆಗಿತ್ತು.
ನಿನ್ನೆ, "ಸಾಕ್ಷಿ... ಯಾಕೋ ಗೊತ್ತಿಲ್ಲಾ? ಇತ್ತೀಚೆಗೆ ಪ್ರತಿ ಕ್ಷಣವೂ ನಿನ್ನೊಂದಿಗಿರಬೇಕೆಂದು ಅನ್ನಿಸುತ್ತಿದೆ. ಕಳೆದ ಆರು ವರ್ಷಗಳಿಂದ ನೀನು ನನ್ನ ಸ್ನೇಹಿತೆಯಾಗಿದ್ದೆ. ಆದರೆ ಕೆಲವು ದಿನಗಳಿಂದ ನಮ್ಮಿಬ್ಬರ ಸಂಬಂಧ ಸ್ನೇಹವನ್ನು ಮೀರಿದ್ದು ಎಂದು ನನಗನ್ನಿಸುತ್ತಿದೆ. ನೀನು ನನ್ನನ್ನು ಮದುವೆಯಾಗುತ್ತೀಯಾ?" ಎಂದು ನೇರವಾಗಿ ಕೇಳಿದಾಗ ಅರೆಕ್ಷಣ ನನ್ನ ಮುಖವನ್ನೇ ದಿಟ್ಟಿಸಿ ನೋಡಿ ಏನೂ ಹೇಳದೆ ಹೊರಟು ಹೋದವಳು, ಈಗ ಮಾತನಾಡಬೇಕಿದೆ ಎನ್ನುತ್ತಿದ್ದಾಳೆಂದರೆ... ಪ್ರಾಯಶಃ ಆ ಕುರಿತೇ ಇರಬೇಕು.
***
ಸಾಗರದ ಅಲೆಗಳ ಹೊಯ್ದಾಟಕ್ಕೂ ನನ್ನ ಮನಸ್ಥಿತಿಗೂ ತಾಳೆ ಹಾಕುತ್ತಾ ಕುಳಿತಿದ್ದೆ. ಚಳಿಗಾಲದ ರಾತ್ರಿ ಬೇಗ ಮನೆಸೇರಿ, ಬೆಚ್ಚಗೆ ಹೊದ್ದುಕೊಂಡು ಮಲಗುವ ತವಕದಲ್ಲಿರುವಂತೆ ಸೂರ್ಯ ಅವಸರದಿಂದ ದಿಗಂತದತ್ತ ಓಡುತ್ತಿದ್ದ.. ಸೂರ್ಯನಿಗೂ ಚಳಿಯೇ? ನನ್ನ ಹುಚ್ಚು ಕಲ್ಪನೆ ನನಗೇ ನಗು ತರಿಸಿತು. ಆದರೆ ತುಟಿಯಂಚಿನವರೆಗೆ ಬಂದ ನಗು ಅಲ್ಲೇ ಮರೆಯಾಗಿ "ಸಾಕ್ಷಿ..." ಎನ್ನುವ ಉದ್ಗಾರವಾಗಿ ಬದಲಾಯ್ತು. ಹೌದು... ಆಕೆ ನಿಧಾನವಾಗಿ ನನ್ನತ್ತಲೇ ನಡೆದು ಬರುತ್ತಿದ್ದಾಳೆ. ಉಸಿರಾಡುವುದನ್ನು ಹೊರತುಪಡಿಸಿ ಮತ್ತೆಲ್ಲವನ್ನೂ ಮರೆತ ಸ್ಥಿತಿ. ಪ್ರಾಯಶಃ ಸಮಾಧಿ ಸ್ಥಿತಿ ಎನ್ನುವುದು ಇದಕ್ಕೇ ಏನೋ? ಗಾಳಿಗೆ ಹಾರುತ್ತಿದ್ದ ಮುಂಗುರುಳನ್ನು ಒಂಥರಾ ಅಸಡ್ಡೆಯಿಂದ ಅದರ ಪಾಡಿಗೆ ಬಿಟ್ಟು ನಡೆದು ಬಂದ ಸಾಕ್ಷಿ ನನ್ನ ಮುಂದೆ ನಿಂತು, "ಬಂದು ತುಂಬಾ ಹೊತ್ತಾಯ್ತ?" ಎಂದು ಕೇಳಿದಾಗಲಷ್ಟೆ ವಾಸ್ತವ ಪ್ರಪಂಚಕ್ಕೆ ಮರಳಿದ್ದು. "ಇಲ್ಲಾ... ಸ್ವಲ್ಪ ಹೊತ್ತಾಯಿತಷ್ಟೇ? ಹೇಳು. ಯಾಕೆ ಬರೋಕೆ ಹೇಳ್ದೆ?" ಎಂಬ ವಾಕ್ಯವನ್ನು ಗಂಟಲು ದಾಟಿಸುವಷ್ಟರಲ್ಲಿ ನಾಲಗೆ ಒಣಗಿತ್ತು. ಎದೆಯಾಳದಲ್ಲೆಲ್ಲೋ ವಿಲಕ್ಷಣ ಚಡಪಡಿಕೆ... ಅರೆ! ದಿನವೂ ಇಷ್ಟವಾಗುತ್ತಿದ್ದ ಅವಳ ಸಾನ್ನಿಧ್ಯ ಇಂದೇಕೋ ತಳಮಳ ಉಂಟುಮಾಡುತ್ತಿದೆಯಲ್ಲಾ...
"ನಾವಿಬ್ಬರೂ ಸ್ನೇಹಿತರಾಗಿದ್ದಾಗ ನಾನು ಯಾವಾಗ, ಯಾಕೆ ಬರೋಕೆ ಹೇಳ್ತೀನಿ ಅಂತಾ ನಾನು ಹೇಳದೆ ನಿನಗೆ ಗೊತ್ತಾಗುತ್ತಿತ್ತು. ಆದರೆ ಇಂದು ನೀನು ನನ್ನನ್ನೇ ಪ್ರಶ್ನೆ ಮಾಡ್ತಿರೋದು ನೋಡಿದ್ರೆ ಪ್ರಾಯಶಃ ನಾನು ಒಬ್ಬ ಒಳ್ಳೆ ಸ್ನೇಹಿತನನ್ನು ಕಳೆದುಕೊಂಡೆ ಅಂತಾ ಅನ್ನಿಸ್ತಿದೆ." ಆಕೆಯ ಮಾತಿನಲ್ಲಿ ಎದೆ ಬಡಿತವನ್ನೇ ಸ್ತಬ್ಧಗೊಳಿಸುವಂಥ ತೀಕ್ಷ್ಣತೆ. ಈವರೆಗೆ ನನ್ನ ಸಾಕ್ಷಿ ಇಷ್ಟು ಕಠಿಣವಾಗಿ ಮಾತನಾಡಿರಲಿಲ್ಲ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನನ್ನ ಬಾಯಿಂದ ಮಾತೇ ಹೊರಡುತ್ತಿಲ್ಲ!
ಏನಾಗುತ್ತಿದೆ ನನಗೆ. ಭೇಟಿಯಾದೊಡನೆ ಆಕೆಯನ್ನು ಕೆಣಕಿ ಸಿಟ್ಟು ತರಿಸುತ್ತಿದ್ದ, ಹುಸಿಕೋಪದಿಂದ ಸಾಕ್ಷಿ ಜಗಳಕ್ಕಿಳಿದಾಗ ತಲೆ ನೇವರಿಸಿ ಸಂತೈಸುತ್ತಿದ್ದ ನನಗೆ ಇಂದೇನಾಗಿದೆ? ಇಂದು ಅವಳನ್ನು ಸ್ಪರ್ಶಿಸುವುದಿರಲಿ, ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವೂ ನನ್ನಲ್ಲಿ ಉಳಿದಿಲ್ಲ. ತಲೆ ಹೋಳಾಗುವಂತಾಗುತ್ತಿದೆ. ಆ ಬಟ್ಟಲು ಕಂಗಳು ಮೊನಚಾದ ನೋಟವನ್ನು ಎದುರಿಸಲಾಗದೆ ತಲೆ ಬಾಗಿಸಿದೆ. ಚಳಿಯಲ್ಲೂ ಮೈ ಬೆವರಲಾರಂಭಿಸಿತು.
"ನಿತಿನ್... ನಿನ್ನನ್ನು ಈ ರೀತಿ ನೋಡಲಾಗುತ್ತಿಲ್ಲ. ನನ್ನನ್ನು ಕೇವಲ ಗೆಳತಿಯಾಗಲ್ಲದೆ ನಿನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆನ್ನುವ ವಾಂಛೆ ನಿನ್ನಲ್ಲಿ ಹುಟ್ಟಿದ್ದಾದರೂ ಹೇಗೆ? ನಮ್ಮಿಬ್ಬರ ಒಡನಾಟ, ಸ್ನೇಹವನ್ನು ನೋಡಿದವರು ಏನೆಲ್ಲಾ ಅನ್ನುತ್ತಿದ್ದರು ಎಂದು ನಿನಗೂ ಗೊತ್ತು. ಆದರೆ ನಾನು ಅವ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಯಾಕೆ ಗೊತ್ತಾ? ನನಗೆ ನಮ್ಮ ಸ್ನೇಹದ ಮೇಲೆ ನಂಬಿಕೆ ಇತ್ತು. ಆದರೆ ನಿನ್ನ ಮನಸ್ಸಲ್ಲಿ ಇಂತಹ ಭಾವನೆ ಇದೆ ಎಂಬುದು ನನಗೆ ತಿಳಿದಿರಲಿಲ್ಲ." ಸಾಕ್ಷಿ ಅದು ಹಾಗಲ್ಲ ಎಂದು ಹೇಳಬೇಕೆಂದುಕೊಂಡೆ. ಪದ ಹುಟ್ಟಲೇ ಇಲ್ಲಾ.
ಕಾಲುಗಳು ಕಸುವು ಕಳೆದುಕೊಳ್ಳಲಾರಂಭಿಸಿದವು. ನಿಂತಲ್ಲೇ ಸಣ್ಣಗೆ ನಡುಗಲಾರಂಭಿಸಿದೆ. ಇದ್ದಬದ್ದ ಶಕ್ತಿ, ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ನಿಧಾನಕ್ಕೆ ತಲೆಯೆತ್ತಿದೆ. ಎದುರಿಗೆ ಸಾಕ್ಷಿ... ಆಕೆಯ ಮೊಗದಲ್ಲಿದ್ದ ಬೇಸರದ ಛಾಯೆ... ನನ್ನ ಬಗ್ಗೆಯೇ ನನಗೆ ರೇಜಿಗೆ ಹುಟ್ಟಿತು. ಆಕೆಯ ಬದುಕಿನ ಸಂತಸದ ಮುನ್ನುಡಿಯಾಗಬೇಕೆಂದಿದ್ದ ನಾನು ಆಕೆಯ ಜೀವನದ ಕಹಿನೆನಪಿನ ಪುಟಗಳಲ್ಲಿ ಸೇರಿಹೋದೆನೆ? ನಿಂತಲ್ಲೇ ಕುಸಿದು ಹೋದೆ.
"ನಿತಿನ್... ಆರ್ ಯೂ ಆಲ್‌ರೈಟ್... ಏನಾಯ್ತೋ..?"
***
ಸಂಜೆಯ ವಾತಾವರಣ ಕೆಂಪೇರಿತ್ತು. ಕುಸಿದಿದ್ದ ನನ್ನನ್ನು ಸಾಕ್ಷಿ ಆಧರಿಸಿದ್ದಳು. ಅವಳ ಕಣ್ಣುಗಳಲ್ಲಿದ್ದ ಗಾಬರಿ ಆಕೆಯ ನೋಟದ ತೀಕ್ಷ್ಣತೆಯನ್ನು ಕಡಿಮೆ ಮಾಡಿತ್ತು. ಆಶ್ಚರ್ಯ! ಅವಳ ತೋಳಿನ ಆಸರೆಯಲ್ಲಿದ್ದರೂ ಆ ಸ್ಪಶ ನನ್ನ ಯಾವ ವಿಕಾರಗಳನ್ನೂ ಕೆರಳಲಿಸಲಿಲ್ಲ! ಹಾಗಾದರೆ ಒಂದು ವಾರದ ಹಿಂದಷ್ಟೇ ಸಾಕ್ಷಿಯ ಕುರಿತಾಗಿ ಉದಿಸಿದ್ದ ನನ್ನ ವಾಂಛೆಗಳೆಲ್ಲಾ ಸತ್ತುಹೋದವೆ? "ನನ್ನನ್ನು ಕ್ಷಮಿಸು" ಎಂದು ಕೇಳಬೇಕೆಂದುಕೊಂಡು ಬಾಯಿ ತೆರೆದೆ. ಏನೂ ಮಾತನಾಡಬೇಡ ಎಂಬಂತೆ ಸಾಕ್ಷಿ ಸಂಜ್ಞೆ ಮಾಡಿದಳು. ಪ್ರಾಯಶಃ ನನ್ನ ತಳಮಳಗಳು ಅವಳಿಗೆ ಅರ್ಥವಾಗಿರಬೇಕು.
"ನಿನ್ನನ್ನು ಹರ್ಟ್ ಮಾಡಬೇಕು ಎಂಬ ಉದ್ಧೇಶ ನನಗಿರಲಿಲ್ಲ. Sorry ಕಣೋ. ನೀನೂ ಎಲ್ಲಾ ಹುಡುಗರ ಥರ ಸ್ನೇಹಕ್ಕೆ ಪ್ರೀತಿಯ ಹಣೆಪಟ್ಟಿ ಹಚ್ಚಲು ಹೊರಟದ್ದು ಕಂಡು ಸ್ವಲ್ಪ ಬೇಜಾರಾಯ್ತು. ನನ್ನ ಮಾತುಗಳಿಂದ ನಿನಗೆ ನೋವಾಗಿದ್ದರೆ Sorry." ಎಂದ ಸಾಕ್ಷಿಯ ಮೊಗದಲ್ಲಿ ಕಂಡಿದ್ದು ಮತ್ತದೇ ಭರವಸೆಯ ಬೆಳಕು.
"ನೀನ್ಯಾಕೆ... Sorry ಕೇಳ್ತಿಯಾ. ಇಷ್ಟೆಲ್ಲಾ ಆದದ್ದು ನನ್ನಿಂದಾಗಿ. ನನ್ನ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ" ಎಂದೆ. ಈ ಬಾರಿ ನನ್ನ ಮಾತು ಕೊರಳಲ್ಲಿ ಧ್ವನಿ ಪಡೆದು, ನಾಲಗೆಯ ಮೇಲಿಂದ ಜಾರಿ, ತುಟಿಯನ್ನು ದಾಟಿ ಸಾಕ್ಷಿಯ ಕಿವಿಯನ್ನು ತಲುಪಿತು.
"ಸಾಕು. ಇನ್ನೇನೂ ಹೇಳಬೇಡ. ಇದೆಲ್ಲಾ ಆಗಿದ್ದು ನಿನ್ನಿಂದಾಗಿ ಅಲ್ಲ, ಅರೆಕ್ಷಣದ ವಾಂಛೆಯಿಂದ ಅನ್ನುವುದು ನನಗೆ ಗೊತ್ತು. ನಡೆದಿದ್ದಕ್ಕೆಲ್ಲಾ ಕಾರಣಗಳು, ವಿವರಣೆಗಳು ನನಗೆ ಬೇಕಾಗಿಲ್ಲ. ಅದೆಲ್ಲಾ ಮರೆತುಬಿಡು. ನನಗೆ ನನ್ನ ಹಳೆಯ ನಿತಿನ್ ಪುನಃ ಸಿಕ್ಕಿದ. ಅಷ್ಟು ಸಾಕು." ಎಂದು ತುಂಟ ನಗೆ ನಕ್ಕಳು. ನನ್ನ ದೇಹಕ್ಕೆ ಕಳೆದು ಹೋದ ಚೈತನ್ಯ ಮತ್ತೆ ಸಿಕ್ಕಿತು. ಸೂರ್ಯ ಪೂರ್ಣವಾಗಿ ಮುಳುಗಲು ಸಿದ್ಧನಾದ.
"ಸರಿ... ಕತ್ತಲಾಗುತ್ತಾ ಬಂತು. ಮನೆಯಲ್ಲಿ ಅಮ್ಮ ಕಾಯ್ತಿರ್ತಾರೆ. ನೀನು ಹೊರಡು" ಎಂದೆ.
"ಯಾವಾಗ್ಲೂ ಮನೆಯವರೆಗೂ ಬಿಡ್ತಾ ಇದ್ಯಲ್ಲಾ. ಇವತ್ತೇನಾಯ್ತು?" ಎಂದ ಸಾಕ್ಷಿಯ ಮಾತಿನಲ್ಲಿ ಮತ್ತೆದೇ ಮುಗ್ಧತೆಯಿತ್ತು.
"ಇನ್ನು ಸ್ವಲ್ಪ ಹೊತ್ತು ಇದ್ದು ಬರ್ತೀನಿ. ಚಳಿ ಜಾಸ್ತಿಯಾಗ್ತಾ ಇದೆ. ನೀನು ಹೊರಡು" ಎಂದರೂ ಆಕೆಯ ಮೊಗದಲ್ಲಿದ್ದ ಪುಟ್ಟ ಮಗುವಿನ ಹಠ ನಾನು ಬರದೆ ಆಕೆ ಹೊರಡುವುದಿಲ್ಲವೆಂಬುದನ್ನು ಸಾರಿ ಹೇಳಿತು.
"ಸರಿ. ಸ್ವಲ್ಪ ಹೊತ್ತು ಒಂಟಿಯಾಗಿರಬೇಕೆಂದರೆ ಇಲ್ಲೇ ಇರು. ನಾನು ಅತ್ತ ಕಡೆ ಕಾಯುತ್ತಿರುತ್ತೇನೆ" ಎಂದ ಸಾಕ್ಷಿ ಮೃದುವಾಗಿ ನನ್ನ ತಲೆ ನೇವರಿಸಿ ಏನೂ ಆಗಿಲ್ಲವೆಂಬಂತೆ ಅತ್ತ ಕಡೆ ಹೆಜ್ಜೆ ಹಾಕಲಾರಂಭಿದಳು.
ಸ್ವಲ್ಪ ಹೊತ್ತು ಆಕೆ ನಡೆದು ಹೋದ ಹಾದಿಯನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಈಗ ಮನಸ್ಸಲ್ಲಿ ಯಾವ ಗೊಂದಲಗಳೂ ಇರಲಿಲ್ಲ. ಶೂನ್ಯ ಭಾವ. ಸ್ವಲ್ಪ ಹೊತ್ತು ನಿಧಾನವಾಗಿ ನಡೆದು ಹೋಗುತ್ತಿದ್ದ ಸಾಕ್ಷಿಯನ್ನು ನೋಡುತ್ತಾ ನಿಂತೆ. ಒಂದೊಂದಾಗಿ ದಡಕ್ಕಪ್ಪಳಿಸುತ್ತಿದ್ದ ಅಲೆಗಳು ಒದ್ದೆ ಮರಳಿನಲ್ಲಿ ಆಕೆ ಮೂಡಿಸಿದ್ದ ಹೆಜ್ಜೆ ಗುರುತುಗಳನ್ನು ಅಳಿಸಿ ಹಿಂದೆ ಹೊಗುತ್ತಿದ್ದವು. ಮುಂದಿನ ದಾರಿ ಸ್ಪಷ್ಟವಾಯಿತು.
"ಸಾಕ್ಷಿ... ನಡಿ ಮನೆಗೆ ಹೋಗೋಣ" ಎಂದು ಜೋರಾಗಿ ಕೂಗಿ ಆಕೆಯತ್ತ ಹೆಜ್ಜೆ ಹಾಕಲಾರಂಭಿಸದೆ.

Friday, 7 November 2008

ಮಾತು ಮರೆತವನ ಸ್ವ'ಗತ'

"ಹ್ಞೂಂ... ಮತ್ತೆ ಕನ್‌ಫ್ಯೂಸ್ ಆದ್ಯಾ?" ಎಂದು ಕೇಳಿ ಆಕೆ ನಗತೊಡಗಿದಳು.
"ಹೌದು" ಎಂದಷ್ಟೇ ಹೇಳಿ, ಮತ್ತೇನು ಹೇಳಬೇಕು ಎಂದು ತಿಳಿಯದೆ, ಒಂದು ಕ್ಷಣ ಪದಗಳಿಗಾಗಿ ತಡಕಾಡಿದೆ. ಉಹ್ಞೂಂ... ಮಾತುಗಳೆಲ್ಲಾ ಬರಿದಾಗಿ ಹೋಗಿತ್ತು. ಬೇರೆನು ಹೇಳಲು ಹೋದರು ಏನಾದರೂ ಎಡವಟ್ಟಾಗುವುದು ಖಚಿತ ಎಂದು 'ಬುದ್ಧಿ' ಎಚ್ಚರಿಕೆಯ ಸಂದೇಶ ನೀಡತೊಡಗಿತು. ಇನ್ನಷ್ಟು ಹೊತ್ತು ಆಕೆಯ ದನಿ ಕೇಳುವ ವಾಂಛೆಯ
ನ್ನು ಬಲವಂತವಾಗಿ ಹತ್ತಿಕ್ಕಿಕೊಂಡು, 'ಬುದ್ಧಿ'ಯ ಮಾತಿಗೆ ಓಗೊಟ್ಟು "ನಂಗೆ ಸ್ವಲ್ಪ ಕೆಲಸ ಇದೆ. ಮತ್ತೆ ನಾನೇ ಕಾಲ್ ಮಾಡ್ತೀನಿ" ಎಂದು ಹೇಳಿ ಕಾಲ್ ಕಟ್ ಮಾಡಿದೆ. ಆಕೆಯ ನಗುವಿನ್ನೂ ಕಿವಿಯಲ್ಲಿ ಮಾರ್ದನಿಸುತ್ತಿತ್ತು...
***
ಕೆ ಹೇಳಿದ್ದು ನಿಜವೆಂದು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಈ ಮೊದಲೂ ಸಾಕಷ್ಟು ಬಾರಿ ನನ್ನನ್ನು ಫೂಲ್ ಮಾಡಲು ಆಕೆ ಇದೇ ಮಾತನ್ನು ಹೇಳಿದ್ದಳು. ಪ್ರಾಯಶಃ ಈ ಬಾರಿಯೂ ನನ್ನನ್ನು ಮೂರ್ಖನನ್ನಾಗಿಸಲು ಹಾಗೆ ಹೇಳಿರಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ಆದರೂ ಮನದ ಮೂಲೆಯಲ್ಲೆಲ್ಲೋ ಕಳವಳ. ಒಂದು ವೇಳೆ ಆಕೆ ಹೇಳಿದ್ದು ನಿಜವಾಗಿದ್ದರೆ ಎಂಬ ಆತಂಕ ಸಣ್ಣಗೆ ಕಾಡತೊಡಗಿತು. ಆರು ವರ್ಷಗಳಿಂದ ನನ್ನ ಸ್ನೇಹಿತೆಯಾಗಿದ್ದರೂ ಅವಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾಗಿದ್ದಕ್ಕಾಗಿ ಇಂದಿನದ್ದೂ ಸೇರಿ ಅದೆಷ್ಟು ಬಾರಿ ಪಶ್ಚಾತ್ತಾಪ ಪಟ್ಟುಕೊಂಡಿದ್ದೇನೋ, ನನಗೆ ನೆನಪಿಲ್ಲ.
"ಅಬ್ಬಾ ಮಾರಾಯ... ನಿನಗೆ ಈ ಜನ್ಮದಲ್ಲಿ ಬುದ್ಧಿ ಬರೋದಿಲ್ಲ. ನೀನು ಹೀಗೇ ಕಾಯುತ್ತಿರು. ಆಮೇಲೆ ಒಂದು ದಿನ ಆಕೆ ತನ್ನ ಗಂಡನ ಜೊತೆ ಬಂದು ನಿನ್ನ ಮುಂದೆ ನಿಂತಾಗ, ಅವನೆದುರೇ ನೀನು ಆಕೆಯನ್ನು ಇಷ್ಟಪಡುತ್ತಿರುವ ವಿಷಯವನ್ನು ಹೇಳುವೆಯಂತೆ... ಆಲ್ ದ ಬೆಸ್ಟ್'' ಎಂದು ಕೋಪದಿಂದ ಬೈಯ್ದು ಹೋಗಿದ್ದ ಗೆಳೆಯನ ಚಿತ್ರ ಕಣ್ಮುಂದೆ ಬಂತು. ಅಲ್ಲಾ... ಎಷ್ಟು ಬಾರಿ ನಾನಾಕೆಯನ್ನು ಇಷ್ಟಪಡುತ್ತಿರುವ ವಿಚಾರವನ್ನು ಆಕೆಯಲ್ಲಿ ಹೇಳಲು ಪ್ರಯತ್ನ ಪಟ್ಟಿಲ್ಲಾ? ಆದರೆ ಮಗುವಿನಂತೆ ತನ್ನೆಲ್ಲಾ ಖುಷಿಗಳನ್ನು, ಅಪರೂಪಕ್ಕೆ ಮನದಾಳದ ನೋವುಗಳನ್ನು ನನ್ನೊಂದಿಗೆ ಹಂಚಿಕೊಳ್ಳುವ ಆಕೆಯ ಮಾತುಗಳಿಗೆ ನಾನು ಕಿವಿಯಾದೆನೇ ಹೊರತು, ನನ್ನ ಮಾತುಗಳನ್ನು ಅವಳ ಹೃದಯ ತಲುಪಿಸು ಧೈರ್ಯ ನನ್ನಲ್ಲಿ ಮೂಡಲೇ ಇಲ್ಲ.
"ನೇರವಾಗಿ ಹೇಳಲಾಗದಿದ್ದರೆ ಪರವಾಗಿಲ್ಲ. ಅಟ್‌ಲೀಸ್ಟ್ ಫೋನ್‌ನಲ್ಲಾದರೂ ಹೇಳಬಹುದಲ್ಲಾ" ಎಂಬ ಸಲಹೆ ನೀಡಿದ್ದ ಸ್ನೇಹಿತರೆಷ್ಟೋ ಮಂದಿ. ಆದರೆ ಅವಳು "ಸ್ನೇಹವನ್ನು ದುರುಪಯೋಗ ಪಡಿಸಿಕೊಂಡೆ" ಎಂದು ಹೇಳಿ ನನ್ನಿಂದ ದೂರವಾದರೆ ಎಂಬ ಭಯ ನನ್ನೆಲ್ಲಾ ಮಾತುಗಳನ್ನು ಮರೆಸುತ್ತಿತ್ತು. ಅಲ್ಲದೆ ಆಗ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳಲು ಹೆಣಗುತ್ತಿದ್ದ ನಾನು ಯಾರದೇ ಪ್ರೀತಿಯನ್ನು ನಿರೀಕ್ಷಿಸುವ ಸ್ಥಾನದಲ್ಲಿಲ್ಲ ಎಂಬ ಕೀಳರಿಮೆ ಕಾಡುತ್ತಿದ್ದುದೂ ಅದಕ್ಕೊಂದು ಕಾರಣವಾಗಿರಬಹುದು.
ಈಗ ಬದುಕು ಒಂದು ಹಂತಕ್ಕೆ ಬಂದಿದೆ. ಇಂದು ಸಾಯಂಕಾಲ ಆಫೀಸ್‌ನಿಂದ ಬಂದು ಫೋನ್ ಮಾಡಿದಾಗ ಮತ್ತದೇ ತುಂಟತನದಿಂದ ಮಾತು ಪ್ರಾರಂಭಿಸಿದ ಅವಳು, "ಹೇ... ನಿಂಗೊಂದು ಸರ್‌ಪ್ರೈಸ್. ಮುಂದಿನ ವಾರ ನನ್ನ ಮದುವೆ ಇದೆ" ಎಂದು ಹೇಳಿ ನಗತೊಡಗಿದಾಗ, "ಇವತ್ತು ಯಾವುದೇ ಕಾರಣಕ್ಕೆ ನಾನು ಫೂಲ್ ಅಗುವುದಿಲ್ಲ" ಎಂದು ದೃಢವಾಗಿ ಹೇಳಿದ್ದೆ. ಆದರೆ, "ಇಲ್ಲಾ ಕಣೋ. ನಿಜವಾಗ್ಲೂ. ಐ ಸ್ವೇರ್ ಬಾಬಾ" ಎಂದಾಗ ಕೊಂಚ ಕನ್‌ಫ್ಯೂಸ್ ಆದದ್ದಂತೂ ನಿಜ. ಏಕೆಂದರೆ ಕಾರಣವಿಲ್ಲದೆ ಆಕೆ 'ಐ ಸ್ವೇರ್' ಅನ್ನುವುದಿಲ್ಲ. ಏನೂ ಹೇಳಲು ತೋಚದೆ, ಮತ್ತೆ ಕಾಲ್ ಮಾಡುತ್ತೇನೆಂದು ಹೇಳಿ ನುಣುಚಿಕೊಂಡಾಯ್ತು. ಮುಂದೇ? ಆಕೆ ಹೇಳಿದ್ದು ನಿಜವಾಗದಿರಲಿ ಎಂದು ಆ 'ಗಣೇಶ'ನನ್ನು ಪ್ರಾರ್ಥಿಸಿದೆ. ಮೊಬೈಲ್ ಮತ್ತೆ ರಿಂಗಣಿಸಲಾರಂಭಿಸಿತು...
***
ರೆ... ಆಕೆಗೆ ಫೋನ್ ಮಾಡಿ ಎರಡು ಆಗಲೇ ಎರಡು ದಿನವಾಯ್ತು. ಆಕೆಗೆ ಫೋನ್ ಮಾಡಿದ ರಾತ್ರಿ, ನನ್ನ ಆಪ್ತ ಗೆಳೆಯನಿಗೆ ಅಪಘಾತವಾದ ಸುದ್ದಿ ಬಂದಿತ್ತು. ಮುಂದೆ ಎರಡು ದಿನ ಆಸ್ಪತ್ರೆಯ ಒತ್ತಡದ ನಡುವೆಯೇ ಕಳೆದು ಹೋಗಿತ್ತು. ಒಂದೆರಡು ಬಾರಿ ಆಕೆಗೆ ಫೋನ್ ಮಾಡಲು ಯತ್ನಿಸಿದರೂ 'ನಾಟ್ ರೀಚೇಬಲ್' ಎನ್ನುವ ಮುದ್ರಿತ ದನಿಯಷ್ಟೇ ಕೇಳಿಬಂತು. ಇಂದು ಆಕೆಯ ಬಳಿ ಮಾತನಾಡಲೇಬೇಕು ಎಂದು ನಿರ್ಧರಿಸಿ, ಮೊಬೈಲ್ ಕೈಗೆತ್ತಿಕೊಂಡೆ. ಅಷ್ಟರಲ್ಲಿ ಕಾಲಿಂಗ್‌ಬೆಲ್ ಸದ್ದು ಮಾಡಿತು. ಬಾಗಿಲಲ್ಲಿ ಕೊರಿಯರ್ ಹುಡುಗ ನಿಂತಿದ್ದ. ಕೈಯಲ್ಲಿ ಯಾವುದೋ ಆಮಂತ್ರಣ ಪತ್ರಿಕೆ ಇದ್ದಂತಿತ್ತು. ಆತ ಕೊಟ್ಟ ಫಾರ್ಮ್‌ನಲ್ಲಿ ಸಹಿ ಹಾಕಿ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ನನ್ನ ಭಯ ಗೆದ್ದಿತು... ಹೊಳೆಯುತ್ತಿದ್ದ 'ಗಣೇಶ'ನ ಆಕರ್ಷಕ ಚಿತ್ರದ ಕೆಳಗೆ ಅಚ್ಚಾಗಿದ್ದ ಅವಳ ಮುದ್ದಾದ ಹೆಸರಿನ ಮೇಲೆ ಬಿದ್ದ ನನ್ನ ಕಂಬನಿಯೂ ಹೊಳೆಯಲಾರಂಭಿಸಿತು...

Sunday, 26 October 2008

ದೀಪಾವಳಿ
ದೀಪಾವಳಿ

ಗೆಳತಿ...
ನಿನ್ನೆರಡು ಕಣ್ಣುಗಳು
ಜೋಡಿ ಹಣತೆಗಳಿದ್ದಂತೆ.
ಅದಕ್ಕೇ...
ನೀನು ನನ್ನೊಡನಿರುವ ಪ್ರತಿ ಕ್ಷಣವೂ,

ನನಗೆ ದೀಪಾವಳಿ!

Friday, 11 April 2008

ಬೋಗಿಯೊಳಗಿನ ಕಲರವ...

ರಾಜಧಾನಿಯ ಥಳುಕು- ಬಳುಕಿನ ನಡುವೆಯೇ ಹೊತ್ತು ಕಳೆಯುವುದಿಲ್ಲ ಎಂಬ ನನ್ನಂತಹ ಸೋಮಾರಿಗೆ ಎರಡು ದಿನಗಳ ರೈಲು ಪಯಣ ಮಹಾನ್ ಶಿಕ್ಷೆಯಂತೆ ಅನಿಸಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ನಗರ, ಹಳ್ಳಿ, ಬೆಟ್ಟ- ಗುಡ್ಡಗಳನ್ನು ಹಿಂದಿಕ್ಕಿ ರೈಲು ಮುಂದೆ ಓಡುತ್ತಿತ್ತು. ಸಾಗಿದಷ್ಟೂ ಮುಗಿಯದ ಹಾದಿ. ಕಪ್ಪನೆಯ ಹೊಗೆಯುಗುಳುತ್ತಾ ರೈಲು ಮುಂದಕ್ಕೆ ದೌಡಾಯಿಸುತ್ತಿದ್ದರೆ ನನ್ನ ಮನಸ್ಸು ನೆನಪುಗಳ ಕಣಜದೊಳಗೆ ನಿಧಾನವಾಗಿ ಹಿಂದಕ್ಕೆ ಜಾರುತ್ತಿತ್ತು...
ಬದುಕು ಎಲ್ಲವನ್ನೂ ಕಲಿಸುತ್ತದೆ. ಅನಿವಾರ್ಯತೆ ಎದುರಾದಾಗ ಎಂತಹ ಭಾವನೆಗಳೂ ಬಾಲಿಶವಾಗುತ್ತದೆ ಎಂದು ಅಪ್ಪ ಹೇಳುತ್ತಿದ್ದ ಮಾತು ಮನದಲ್ಲೊಮ್ಮೆ ಮಿಂಚಿ ಮರೆಯಾಯ್ತು. ಆದರೆ ನನ್ನ ಬದುಕೇ ಆ ಮಾತಿಗೆ ನಿದರ್ಶನವಾದೀತು ಎಂಬ ಕಲ್ಪನೆಯೂ ನನಗಿರಲಿಲ್ಲ. ಕಾಲೇಜು ಮೆಟ್ಟಿಲೇರಿದ್ದರೂ ಅಮ್ಮನ ಬೆಚ್ಚಗಿನ ಆರೈಕೆಯಲ್ಲಿಯೇ ಭದ್ರವಾಗಿ ಬಚ್ಚಿಟ್ಟು ಕೊಂಡಿದ್ದ ನಾನು ಉದ್ಯೋಗ ನಿಮಿತ್ತ ಅಪ್ಪ-ಅಮ್ಮ, ಮನೆ, ಸಂಬಂಧಗಳ ಸೂಕ್ಷ್ಮ ಸುಳಿಗಳನ್ನು ಬಿಟ್ಟು ಸಾವಿರಾರು ಮೈಲು ದೂರದ ಊರಿಗೆ ಬಂದು ನೆಲೆಸಿದ್ದು ವಿಧಿಯ ಆಟವೇ? ಅಥವಾ ಬದುಕಿನ ವಿವಿಧ ಮಜಲಿನ ಒಂದು ಹಂತವೇ? ಎಂಬ ಧ್ವಂದ್ವ ನನ್ನನ್ನಿಂದಿಗೂ ಕಾಡುತ್ತಿದೆ. ತಲೆ ಧಿಮ್ಮೆನ್ನುವಂತೆ ಮಾಡುತ್ತಿದ್ದ ಈ ಎಲ್ಲಾ ಯೋಚನೆಗಳ ನಡುವೆಯೂ, ಆರು ತಿಂಗಳ ಬಳಿಕ ಮತ್ತೆ ಹುಟ್ಟಿದ ಮಣ್ಣಿಗೆ ಮರಳಿ, ತಾಯ ಮಡಿಲಲ್ಲಿ ತಲೆಯಿಟ್ಟು, ಇಷ್ಟು ಕಾಲ ಮನದೊಳಗೇ ಹುದುಗಿಸಿಟ್ಟಿದ್ದ ಬೇಗುದಿ, ಬೇಸರಗಳನ್ನೆಲ್ಲಾ ಮರೆಯುವ ತವಕ ಮಾತ್ರ ಕಿಂಚಿತ್ತೂ ಕಡಮೆಯಾಗಿರಲಿಲ್ಲ. ಆ ಅವರ್ಣನೀಯ ಸಂಭ್ರಮದ ಕ್ಷಣದ ಮುಂದೆ ಈ ಆಯಾಸವೆಲ್ಲವೂ ಗೌಣವಾಗಿ ಕಂಡಿತ್ತು. ಮತ್ತೆ ಹಳೆಯ ದಿನಗಳು ಮರಳಬಾರದೇ ಎನ್ನುವ ತವಕದೊಂದಿಗೆ, ಬಾರದ ನಿದ್ದೆಯನ್ನು ತಂದುಕೊಳ್ಳುವ ಪ್ರಯತ್ನ ಮಾಡುತ್ತಾ ನಿಧಾನವಾಗಿ ಕಣ್ಣುಗಳನ್ನು ಮುಚ್ಚಿಕೊಂಡೆ. ರೈಲಿನ ಕುಲುಕಾಟ, ಹಿತವಾಗಿ ಬೀಸುತ್ತಿದ್ದ ಗಾಳಿ ಇವೆಲ್ಲವೂ ತೊಟ್ಟಿಲಿನೊಳಗೆ ಬೆಚ್ಚಗೆ ಮಲಗಿದ ಕಂದನ ಸುಖವನ್ನು ನೆನಪಿಸುತ್ತಿತ್ತು... ಕಣ್ಣಾಲಿಗಳಲ್ಲಿ ನಿದ್ದೆಯ ಜೊಂಪು ಮೆತ್ತಗೆ ಆವರಿಸತೊಡಗಿತು...
***
ಪಿಸುಮಾತು, ಮೆಲುವಾದ ಬಿಕ್ಕಳಿಕೆ, ಸಾಂತ್ವನದ ನುಡಿಗಳು... ಅರೆರೆ ಇದೇನಿದು ಅಂದುಕೊಳ್ಳುವಷ್ಟರಲ್ಲಿ ನಿದ್ರಾದೇವಿಯ ಗಾಢ ಆಲಿಂಗನದಿಂದ ಒಮ್ಮೆಲೆ ಹೊರ ಜಾರಿದ ಅನುಭವ. ವಾಸ್ತವ ಅರಿವಿಗೆ ಬಂದು ಕಣ್ತೆರೆದು ನೋಡಿದರೆ ಸುತ್ತಲೂ ಕತ್ತಲು. ರಾತ್ರಿಯ ಮೌನವನ್ನು ಮುರಿದು ಮುನ್ನುಗುತ್ತಿದ್ದ ರೈಲಿನ ಸದ್ದು. ಅಲ್ಲೊಮ್ಮೆ ಇಲ್ಲೊಮ್ಮೆ ಮಿಣುಕಾಡುತ್ತಿದ್ದ ಬೆಳಕು ಬಿಟ್ಟರೆ ಬೇರೆ ‍ಯಾವುದೂ ಅರಿವಿಗೆ ಬರಲಿಲ್ಲ. ಆದರೆ ಈ ಮಧ್ಯೆಯೂ ನನಗೆ ಆ ಬಿಕ್ಕಳಿಕೆ ಕೇಳಿಸಿದ್ದು ನಿಜ. ಅದು ಖಂಡಿತಾ ಕನಸಲ್ಲ ಎಂದು ಮನಸ್ಸು ಒತ್ತಿ ಹೇಳುತ್ತಿತ್ತು.
ನಿಧಾನವಾಗಿ ಬೋಗಿಯೊಳಗೆ ಹರಡಿದ್ದ ಮಂದ ಬೆಳಕಿಗೆ ಕಣ್ಣು ಹೊಂದಿಕೊಳ್ಳಲಾರಂಭಿಸಿತು. ನನ್ನ ಎಡಗಡೆಗಿದ್ದ ಬರ್ತ್‌ನಿಂದ ಆ ಬಿಕ್ಕಳಿಕೆ ಕೇಳಿಬರುತ್ತಿತ್ತು. ಅದು ಮುಂಜಾನೆ ನನ್ನೊಂದಿಗೆ ರೈಲನ್ನೇರಿದ್ದ ಯುವತಿಯದ್ದು ಎಂಬುದು ಅರಿವಾಗಲು ನನಗೆ ಹೆಚ್ಚು ಸಮಯ ತಗುಲಲಿಲ್ಲ. ಆಕೆಯನ್ನು ಸಂತೈಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ಆಕೆಯ ಸಂಗಾತಿ ನಿರಾಶನಾಗಿ ಕುಳಿತಿದ್ದ.
ಮುಂಜಾನೆ ರೈಲನ್ನೇರಿದಾಗಿನಿಂದಲೂ ಆ ಜೋಡಿ ಎಲ್ಲರ ಗಮನ ಸೆಳೆದಿತ್ತು. ಆಕೆಗೆ ಸುಮಾರು 18ರ ವಯಸ್ಸಿರಬಹುದು. ತಕ್ಕ ಮಟ್ಟಿಗೆ ಚೆಲುವೆಯೆಂದೇ ಹೇಳಬಹುದು. ಇನ್ನು, ಗಟ್ಟಿಮುಟ್ಟಾಗಿದ್ದ ಆಕೆಯ ಜೊತೆಗಾರನದು 25ರ ಆಸುಪಾಸು. ಬೆಳಗ್ಗಿನಿಂದ ಬೋಗಿಯೋಳಗೆ ಸ್ವಚ್ಛಂದ ಹಕ್ಕಿಯಂತೆ ಹಾರಾಡುತ್ತಿದ್ದ ಆ ಜೋಡಿಯನ್ನು ನೋಡಿದರೆ ಅವರಿಬ್ಬರಿಗೂ ಆಗಷ್ಟೇ ಮದುವೆಯಾದಂತಿತ್ತು. ಆದರೆ ಆಕೆಯ ಕತ್ತಿನಲ್ಲಿ ತಾಳಿಯಾಗಲೀ ಬೆರಳಲ್ಲಿ ಕಾಲುಂಗುರವಾಗಲೀ ಗೋಚರಿಸಿರಲಿಲ್ಲ...
ಇಡೀ ಜಗತ್ತೇ ತಮ್ಮದೆಂಬಂತೆ ಮೆರೆಯುತ್ತಿದ್ದ ಅವರಿಬ್ಬರೂ ಈಗ ಈ ರೀತಿ ವಿಷಾದದಲ್ಲಿ ಮುಳುಗಿರುವುದನ್ನು ನೋಡಿದರೆ ಏನೋ ತೊಂದರೆಯಾಗಿರುವುದಂತೂ ನಿಜ ಎಂಬ ಅನುಮಾನ ನನ್ನನ್ನು ಕಾಡದಿರಲಿಲ್ಲ. ಜೊತೆಗೆ ಆಕೆಯ ಅಳುವಿಗೆ ಕಾರಣ ತಿಳಿದುಕೊಳ್ಳಲೇ ಬೇಕೆಂಬ ಕೆಟ್ಟ ಕುತೂಹಲವೂ ಸೇರಿಕೊಂಡಿತು. ಅಲ್ಲಿಗೆ ನನ್ನ ನಿದ್ದೆಗೆ ತಿಲಾಂಜಲಿ ನೀಡಿ ಮಲಗಿದಲ್ಲಿಂದಲೇ ಮೆತ್ತಗೆ ಹೊರಳಿ ಅವರಿಬ್ಬರನ್ನು ಗಮನಿಸತೊಡಗಿದೆ. ಆಕೆಯ ಬಿಕ್ಕಳಿಕೆ ಮತ್ತದಕ್ಕೆ ಸಂಗಾತಿಯ ಸಾಂತ್ವನ ಮುಂದುವರಿದಿತ್ತು. ಅಳುವಿನ ನಡುವೆಯೇ ಸಾಗಿದ್ದ ಮಾತುಗಳಿಂದಾಗಿ ಇನ್ನೂ ಕಾಲೇಜು ಕಲಿಯುತ್ತಿದ್ದ ಆಕೆ, ಆ ಯುವಕನ ಪ್ರೇಮಪಾಶದಲ್ಲಿ ಸಿಲುಕಿ, ಮನೆಯವರ ವಿರೋಧದ ಕಾರಣದಿಂದಾಗಿ ತನ್ನ ಹೆತ್ತವರನ್ನೂ, ಮನೆಯನ್ನೂ ತೊರೆದು ತನ್ನ ಪ್ರಿಯತಮನೊಡನೆ ಬಂದಿರುವುದು ಖಾತ್ರಿಯಾಯಿತು. ಆದರೆ ಈಗ ಇತ್ತ ಪ್ರೀತಿಸಿದವನನ್ನು ಬಿಡಲಾರದೆ ಅತ್ತ ಹೆತ್ತವರ ಬಂಧವನ್ನೂ ತೊರೆಯಲಾರದೆ ತೊಳಲಾಡುತ್ತಿದ್ದಳು ಆ ಹುಡುಗಿ. ಪ್ರಾಯಶಃ ಅವರಿಬ್ಬರೂ ನನ್ನನ್ನು ಗಮನಿಸದಂತಿರಲಿಲ್ಲ. ಅದೂ ಸರಿ. ಪ್ರೀತಿಗಾಗಿ ಇಡೀ ಜಗತ್ತನ್ನೇ ಧಿಕ್ಕರಿಸಿ ಹೊರಟವರಿಗೆ ನಾನ್ಯಾವ ಲೆಕ್ಕ. ಮತ್ತಷ್ಟು ಕುತೂಹಲದಿಂದ ಆಕೆಯನ್ನು ಗಮನಿಸತೊಡಗಿದೆ, ನಸುಗತ್ತಲಲ್ಲೂ ಕಣ್ಣೀರು ತುಂಬಿ ಹೊಳೆಯುತ್ತಿದ್ದ ಆ ಕಣ್ಣುಗಳಲ್ಲಿ ಆಗಷ್ಟೇ ಉನ್ಮತ್ತ ಪ್ರೀತಿಯ ಅಮಲು ಇಳಿದು ಹೋದ ಲಕ್ಷಣವಿತ್ತು. ಹೆಚ್ಚು ಕಡಿಮೆ ಆ ಯುವಕನದ್ದೂ ಅದೇ ಕಥೆ.
ಈಗ ಅವರಿಬ್ಬರ ಮೊಗದಲ್ಲಿರುವುದು ಪ್ರೀತಿ ತಂದಿತ್ತ ನೋವಿನ ನೆರಳೇ ಅಥವಾ ವಿಷಾದವೇ?... ಉಹ್ಞೂಂ... ಅದು ನನಗೂ ಸ್ಪಷ್ಟವಾಗಲಿಲ್ಲ. ಪ್ರಾಯಶಃ ಅವರಿಬ್ಬರಲ್ಲೂ ಮಾತುಗಳು ಮುಗಿದಿದ್ದವು. ರಾತ್ರಿಯ ನೀರವ ಮೌನವನ್ನು ಭೇದಿಸಿ ತನ್ನ ಗಮ್ಯದತ್ತ ಮುನ್ನಡೆಯುತ್ತಿದ್ದ ರೈಲಿನ ಸದ್ದು ಅವರಿಬ್ಬರ ಮೌನ ರೋದನವನ್ನು ಮೀರಿ ಮಾರ್ದನಿಸುತ್ತಿತ್ತು. ಅಬ್ಬಾ! ಕೆಲವೇ ದಿನಗಳ ಹಿಂದೆ ಪ್ರೀತಿಯ ಮಾತಿಗಾಗಿ, ಪರಸ್ಪರ ಸಾನಿಧ್ಯಕ್ಕಾಗಿ ಹಂಬಲಿಸುತ್ತಿದ್ದಿರಬಹುದಾದ ಆ ಜೋಡಿ ಇಂದು ತಮ್ಮಲ್ಲಿ ಹಂಚಿಕೊಳ್ಳಲು ಏನೂ ಉಳಿದಿಲ್ಲವೇನೋ ಎಂಬಂತೆ ಕುಳಿತುಕೊಂಡಿದ್ದು ನೋಡಿ 'ಪ್ರೀತಿ' ಎಂದರೆ ಇಷ್ಟೇನಾ ಎಂಬ ಸಂದೇಹ ನನ್ನನ್ನು ಕಾಡತೊಡಗಿತು... ಬಹಳ ಹೊತ್ತಾದರೂ ಅವರಿಬ್ಬರು ಮತ್ತೆ ಮಾತನಾಡುವ ಪ್ರಯತ್ನ ಮಾಡಲಿಲ್ಲ. ಪ್ರಾಯಶಃ ನನ್ನನ್ನು ಕಾಡುತ್ತಿರುವ 'ಪ್ರಶ್ನೆ'ಯೇ ಅವರನ್ನೂ ಆವರಿಸಿರುವಂತೆ ಕಂಡುಬಂತು. ಅವರನ್ನು ಅವರ ಪಾಡಿಗೆ ಬಿಟ್ಟು ನಾನು ನಿಧಾನವಾಗಿ ಮಗ್ಗುಲು ಬದಲಾಯಿಸಿ ನಿದ್ರಿಸುವ ಪ್ರಯತ್ನ ಮಾಡಿದೆ. ಆದರೆ ಗೊಂದಲವೇ ತುಂಬಿದ್ದ ಕಣ್ಣಿಗೆ ನಿದ್ದೆಯ ಸುಖವಾದರೂ ಎಲ್ಲಿಂದ ಬರಬೇಕು...
ಮುಂದೇನು..?
ತಮ್ಮ ಪ್ರೀತಿಯನ್ನು ಮನೆಯವರು ಒಪ್ಪಲಿಲ್ಲ ಎಂದಾಕ್ಷಣ ಮನೆಯಿಂದ, ಹೆತ್ತವರಿಂದ ದೂರಾಗುವ, ಇಲ್ಲವೇ ಆತ್ಮಹತ್ಯೆಯಂತಹ ಪರಮ ಮೂರ್ಖತನದ ಕಾರ್ಯಕ್ಕೆ ಕೈಹಾಕುವ ಇವರಂತಹ 'ಪ್ರೇಮಿ'ಗಳು 'ಮುಂದೇನು?' ಎಂಬ ಪ್ರಶ್ನೆಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದರೆ ಪ್ರಾಯಶಃ ಈ ರೀತಿ ಕಣ್ಣೀರು ಹಾಕಬೇಕಾದ ಪ್ರಸಂಗ ಬರುತ್ತಿರಲಿಲ್ಲವೇನೋ? ಎಂಬ ಅನಿಸಿಕೆ ಮಿಂಚಿ ಮರೆಯಾಯ್ತು. ಯೌವನದ ಹುಚ್ಚು ಆವೇಶಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಲ್ಲ. ಆದರೆ ಆ ಆವೇಗ ಕಡಿಮೆಯಾದ ಮೇಲಷ್ಟೇ ತಾರುಣ್ಯದ ಆಕಾಂಕ್ಷೆಯಿಂದ ಉದ್ಭವವಾಗುವ ಒಂದು ಕ್ಷಣದ 'ಹುಚ್ಚು ಪ್ರೀತಿ'ಗಾಗಿ ತಾವು ಕಳೆದುಕೊಂಡಿರುವ ನಿಜವಾದ 'ಪ್ರೀತಿ'ಯ ಅರಿವಾಗುವುದು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ... ಮತ್ತೆ ಮನೆ, ಅಮ್ಮ, ಪಪ್ಪ, ಊರಿನ ನೆನಪು ತೀವ್ರವಾಗಿ ಕಾಡಲಾರಂಭಿಸಿತು. ಹೆತ್ತವರ ವಾತ್ಸಲ್ಯದ ಅನುಭೂತಿ ನೆನೆಸಿಕೊಂಡಾಕ್ಷಣ ಮನ ರೋಮಾಂಚನ ಗೊಂಡಿತು. ಈ ಮಧ್ಯೆ ಬಳಲಿದ್ದ ದೇಹವನ್ನು ನಿದ್ರಾದೇವಿ ಅದೆಷ್ಟು ಹೊತ್ತಿಗೆ ತನ್ನ ಮಡಿಲಿಗೆಳೆದುಕೊಂಡಳೋ ಅರಿವಾಗಲೇ ಇಲ್ಲ.
***
'ಚಾಯ್, ಬೋಲಿಯೇ... ಚಾಯ್... ಚಾಯ್...' ಎಂಬ ಗದ್ದಲ ಮತ್ತೊಮ್ಮೆ ಗಾಢ ನಿದ್ದೆಯಿಂದ ನನ್ನನ್ನು ಬಡಿದೆಬ್ಬಿಸಿತು. ಕಣ್ಣುಜ್ಜಿಕೊಂಡು ವಾಚ್ ನೋಡಿಕೊಂಡರೆ 8 ಗಂಟೆ ಆಗಿತ್ತು. ಅಬ್ಬಾ! ರಾತ್ರಿ ಯೋಚನೆಗಳಲ್ಲೇ ಕಳೆದುಹೋಗಿದ್ದ ನಾನು ತುಂಬಾ ಹೊತ್ತು ಮಲಗಿಬಿಟ್ಟಿದ್ದೆ. ಬರ್ತ್‌ನಿಂದ ಕೆಳಗಿಳಿದು ಇನ್ನೂ ಓಡುತ್ತಲೇ ಇದ್ದ ರೈಲಿನ ಕಿಟಕಿಯಿಂದ ಹೊರಗಿಣುಕಿ ನೋಡಿದೆ.
ಸುಳಿಯುತ್ತಿದ್ದ ತಣ್ಣನೆಯ ಗಾಳಿ, ಸಾಲು ಸಾಲು ತೆಂಗು, ಮಣ್ಣಿನ ಕಂಪು ಇನ್ನು ಸ್ವಲ್ಪವೇ ಸಮಯದಲ್ಲಿ ನಾನು ನಮ್ಮೂರಲ್ಲಿರುತ್ತೇನೆ ಎಂಬುದನ್ನು ಸಾರಿ ಹೇಳುತ್ತಿತ್ತು. ಮನೆ ಸೇರುತ್ತೇನೆಂಬ ಸಂತಸ, ಅಮ್ಮನ ಮಡಿಲು ಸೇರುವ ಆಹ್ಲಾದ ಇವೆಲ್ಲ ಭಾವಗಳು ಸೇರಿಕೊಂಡು ಖುಷಿಯಿಂದ ಕುಣಿಯಬೇಕೆಂದುಕೊಂಡರೂ ಆ ಬೋಗಿಯಲ್ಲಿ ಇನ್ನೂ ಕೆಲವು ಸಹಪ್ರಯಾಣಿಕರಿದ್ದುದರಿಂದ ಆ ಆಸೆಯನ್ನು ಅಲ್ಲೇ ಹತ್ತಿಕ್ಕಿಕೊಂಡೆ. ಈ ನಡುವೆ ರಾತ್ರಿಯ ಘಟನೆಗಳು ಮತ್ತೆ ನೆನಪಾದವು...
ಅರೆ! ಆ ಜೋಡಿ ಎಲ್ಲಿ? ಅವರಿದ್ದ ಬರ್ತ್ ಖಾಲಿಯಾಗಿತ್ತು. ಪ್ರಾಯಶಃ ನಾನು ನಿದ್ದೆಯಲ್ಲಿದ್ದಾಗ, ಅವರಿಬ್ಬರು ಇಳಿದು ಹೋಗಿರಬೇಕು... ಅಥವಾ ಇನ್ನೇನಾದರೂ...!?
ಛೇ! ಛೇ! ಆ ರೀತಿ ಕೆಟ್ಟದ್ದೇನೂ ಆಗಿರಲಿಕ್ಕಿಲ್ಲ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಕೂ... ಎಂಬ ಸದ್ದಿನೊಂದಿಗೆ ರೈಲು ಇದ್ದಕ್ಕಿದ್ದಂತೆ ತನ್ನ ವೇಗ ತಗ್ಗಿಸಿಕೊಂಡಿತು. ನಾನು ಇಳಿಯಬೇಕಾದ ನಿಲ್ದಾಣ ಬಂತು. ಅಲ್ಲಿಂದ ಮನೆ ತಲುಪಲು ಮತ್ತೆ ಬಸ್ಸು ಹಿಡಿಯಬೇಕಾಗಿದ್ದರಿಂದ ಆತುರಾತುರವಾಗಿ ಲಗೇಜುಗಳನ್ನು ಸರಿಪಡಿಸಿಕೊಂಡು ಇಳಿಯಲು ಸಿದ್ಧನಾದೆ. ಪರಿಚಿತ ನೆಲ, ಭಾಷೆಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮನದಲ್ಲಿದ್ದ ಎಲ್ಲಾ ಗೊಂದಲಗಳೂ ಕಳೆದುಹೋದವು. ಇರುಳು ಉದ್ಭವಿಸಿದ್ದ ಪ್ರಶ್ನೆ ಮರೆತು ಹೋಯ್ತು... ಆ ಪ್ರೇಮಿಗಳು ಏನಾದರು ಎಂಬ ಕುತೂಹಲ ಕೂಡಾ ಸತ್ತುಹೊಯ್ತು. ಅಂತಿಮವಾಗಿ ಅಲ್ಲಿ ಉಳಿದದ್ದು ಮನೆ ಸೇರುವ ತವಕ ಮಾತ್ರ. ಎಲ್ಲವನ್ನೂ ಮರೆತು ತನ್ನ ಗಮ್ಯದತ್ತ ಮುನ್ನುಗ್ಗುವ ರೈಲಿನಂತೆ ನಾನೂ ಹತ್ತಿರದಲ್ಲಿದ್ದ ಬಸ್ಸು ನಿಲ್ದಾಣದತ್ತ ಹೆಜ್ಜೆ ಹಾಕಿದೆ.

Friday, 22 February 2008

ಹುಚ್ಚು ಕೋಡಿ ಮನಸ್ಸು...

"ಮೊನ್ನೆ ಮೊನ್ನೆಯವರೆಗೆ ಚೆನ್ನಾಗಿದ್ದ ಹುಡುಗ ಈಗ ಒಂಥರಾ ಆಡ್ತಿದ್ದಾನೆ... ನಂಗ್ಯಾಕೋ ಅನುಮಾನ...?"
" ಅರೆ ಯಾಕೋ ಮಾರಾಯ.. ಇದ್ದಕ್ಕಿದ್ದಂಗೆ ನಗ್ತಾ ಇದ್ದೀಯಲ್ಲೋ ಏನಾಯ್ತೋ ನಿಂಗೆ..?"
ಅರೇ ಇದೇನಿದು ಅಂಥ ಯೋಚಿಸ್ತಿದ್ದೀರಾ...? ಮತ್ತೇನಿಲ್ಲ...
ಬಾಂಧವ್ಯವೊಂದರ ಅಲೆಗೆ ಸಿಕ್ಕಿಬಿದ್ದು ಹೊಯ್ದಾಡುವ ಹುಡುಗರ ಬಗ್ಗೆ ಆತನ ಮನೆಯವರು, ಸ್ನೇಹಿತರು ಯಾವ ರೀತಿ ಮಾತನಾಡುತ್ತಾರೆ ಅನ್ನೋದಕ್ಕೆ ಒಂದು ಸಣ್ಣ ಉದಾಹರಣೆ ಕೊಟ್ಟೆ ಅಷ್ಟೆ...
ಒಂದು ಅನುಪಮವಾದ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದು ನಿಜಕ್ಕೂ ಸವಾಲಿನ ಕೆಲಸ. ಅಂಥಾ ಸಂಬಂಧವೊಂದನ್ನ ಕಂಡುಕೊಳ್ಳುವ ತುಡಿತದಲ್ಲಿರುವ ವ್ಯಕ್ತಿಯ ಬಗ್ಗೆ ನಾವಾಡುವ ಸಹಜ ಮಾತುಗಳಿವು... ಆದರೆ ಈ ರೀತಿ ಗೊಂದಲಕ್ಕೆ ಬಿದ್ದವರಿಗೆ ಮಾತ್ರ ಇದ್ಯಾವುದರ ಪರಿವೇ ಇರೋದಿಲ್ಲ.. ಅವರದೇನಿದ್ರೂ 'ಡೋಂಟ್ ಕೇರ್ ಪಾಲಿಸಿ'...
ಆದರೆ ಎಷ್ಟು ದಿನ?
ತಮ್ಮನ್ನು ಕಾಡುವ ಹುಚ್ಚು ಭಾವನೆಗಳ ಅಲೆಯಿಂದ ಹೊರ ಬರುವವರೆಗೆ ಮಾತ್ರ... ನಂತರ ಅವರೂ ನಮ್ಮಂತೆ 'ನಾರ್ಮಲ್' ಮನುಷ್ಯರಾಗುತ್ತಾರೆ... ಆಮೇಲೆ ಅವರ ಜೊತೆ ಕುಳಿತು ಮಾತನಾಡಿ ನೋಡಿ... ಅದ್ಭುತ ಅನುಭವಗಳ ಮೂಟೆಯೇ ಅವರಲ್ಲಿರುತ್ತದೆ... ಏಷ್ಟಾದರೂ ಮೋಹ ಕಲಿಸುವ ಪಾಠ ನಿಜಕ್ಕೂ ಅನನ್ಯ...
ಇಷ್ಟಕ್ಕೂ ಇಲ್ಲಿ ನಾವು ಗಮನಿಸಬೇಕಾದ್ದು, ಮೋಹಕ್ಕೆ ಸಿಲುಕಿದ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂಬುದನ್ನಲ್ಲ. ಬದಲಾಗಿ, ಅವರನ್ನು ಆ ರೀತಿ ವರ್ತಿಸುವಂತೆ ಮಾಡುವ ಆ ಭಾವನೆಯ ಸಾಮರ್ಥ್ಯವನ್ನ.
ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಏರಿಸುವ ಸಾಮರ್ಥ್ಯ ಈ ಭಾವನೆಗಳ ಹುಚ್ಚುಕೋಡಿಗಿರುತ್ತೆ. ಆದರೆ ನಮ್ಮಲ್ಲಿರುವ ವಿವೇಕ ಈ ಸೆಳೆತದಿಂದ ನಮ್ಮನ್ನು ರಕ್ಷಿಸಿ ಮತ್ತೆ ಮಾಮೂಲು ಮನುಷ್ಯರನ್ನಾಗಿಸಲು ಶಕ್ತವಾಗಿರಬೇಕಷ್ಟೆ. ಇಲ್ಲದೇ ಹೋದಲ್ಲಿ ಅನಾಹುತವಾಗುತ್ತದೆ. ಇಷ್ಟಕ್ಕೂ ಭಗ್ನ ಪ್ರೇಮಿಗಳೆಂದು ಕರೆಸಿಕೊಳ್ಳುವವರು, ಪ್ರೀತಿಗಾಗಿ ಪ್ರಾಣವನ್ನೇ ಬಲಿಕೊಟ್ಟ ಆಧುನಿಕ 'ಅಮರ ಪ್ರೇಮಿ'ಗಳ ಉದಾಹರಣೆಗಳನ್ನು ಗಮನಿಸಿದರೆ ನಿಮಗಿದು ಸ್ಪಷ್ಟವಾಗುತ್ತದೆ.
ಆದರೆ ಎಲ್ಲರೂ ಇದೇ ರೀತಿ ಇರುತ್ತಾರೆಂದಲ್ಲ. ಸರಿಯಾದ ಸಮಯದಲ್ಲಿ ಎಚ್ಚರಿಸಿದರೆ ಈ 'ಭಾವನಾ' ಜೀವಿಗಳು ಖಂಡಿತಾ ಹುಚ್ಚುಕೋಡಿಯಲ್ಲಿ ಕೊಚ್ಚಿ ಹೋಗುವುದಿಲ್ಲ. ಹಿಂತಿರುಗಿ ಬರುತ್ತಾರೆ... ಮತ್ತೆ ವಾಸ್ತವಕ್ಕೆ ತಮ್ಮನ್ನು ತಾವು ತೆರೆದು ಕೊಳ್ಳುತ್ತಾರೆ... ಇದಕ್ಕಾಗಿ ಅವರನ್ನು ಎಚ್ಚರಿಸುವುದು ಮುಖ್ಯ..
ಎಷ್ಟಾದರೂ ಈ 'ಮೋಹ'ದ ಮೋಡಿ ಎನ್ನುವುದು ತೀರಾ ಅನನ್ಯ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ಈ ಸುಳಿಗೆ ಸಿಲುಕಿ ಅದರ ಸವಿಯನ್ನು, ಮಾಧುರ್ಯವನ್ನು ಅನುಭವಿಸಿಯೇ ಇರುತ್ತಾರೆ. ಈಗ ಅವುಗಳನ್ನೆಲ್ಲಾ ನೆನಸಿಕೊಂಡರೆ, ನಮ್ಮ ಹುಚ್ಚು ವಾಂಛೆಗಳ ಪೀಕಲಾಟ ಸಣ್ಣಗೆ ನಗು ತರಿಸುತ್ತವೆ. ಆದರೆ ಭಾಂದವ್ಯದ ಅಲೆಗೆ ಸಿಲುಕಿದ್ದ ಕಾಲದಲ್ಲಿ ಇವೇ ಪೀಕಲಾಟಗಳು ನಮಗೆ 'ಅಮರ ಪ್ರೇಮಿ'ಗಳ ಹೆಗ್ಗುರುತುಗಳಾಗಿ ಕಂಡಿರುತ್ತವೆ. ಕಾಲ ನಮ್ಮಲ್ಲಿ ಎಷ್ಟೊಂದು ಬದಲಾವಣೆಗಳನ್ನು ತರುತ್ತವೆ ಅಲ್ಲವೇ...!?

Monday, 11 February 2008

ಚದುರಿದ ಕನಸು...

ಯಾಕೋ ಮನಸ್ಸು ಸ್ಥಿಮಿತದಲ್ಲಿಲ್ಲ. ಭರವಸೆಯ ಒರತೆ ಬತ್ತಿ ಹೋಗಿದೆ. ಅಚಾನಕ್ಕಾಗಿ ಏಕತಾನತೆ ಕಾಡುತ್ತಿದೆ. ವರ್ಷಗಳಿಂದ ಹನಿಹನಿಯಾಗಿ ಕೂಡಿಟ್ಟ ಕನಸುಗಳೆಲ್ಲ ಒಮ್ಮೆಲೇ ಯಾರೋ ಅಪಹರಿಸಿದ ಅನುಭವ.. ಮನಸ್ಸೆಲ್ಲ ಖಾಲಿ ಖಾಲಿ... ಎತ್ತ ನೋಡಿದರೂ ಕತ್ತಲು, ಬರೀ ಗಾಡಾಂಧಕಾರ..

'ಬೆಳಕಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯ, ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದೆಂತು?' ಎಂದು ಎಲ್ಲೋ ಓದಿದ್ದ ವಾಕ್ಯ ಮನಪಟಿಲದ ಮೇಲೊಮ್ಮೆ ಮಿಂಚಿ ಮರೆಯಾಯ್ತು. ಭಾರವಾದ ಹೃದಯ ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದರೆ, ಮನಸ್ಸೆಲ್ಲೋ ಕಳೆದು ಹೋಗಿತ್ತು. ಕಣ್ಣುಗಳಲ್ಲಿ ತುಂಬಿಕೊಂಡ ನೀರು ಹೊರ ಹರಿಯುತ್ತಿರಲಿಲ್ಲ. ಎಷ್ಟಾದರು ಗಂಡಸು ಅಳಬಾರದೆನ್ನುವ ಸಂಪ್ರದಾಯದಲ್ಲಿ ಬೆಳೆದ ಮನಸ್ಸು.. ಕಣ್ಣೀರಾದರು ಏನು ಮಾಡೀತು?

ಗೆಳೆಯ ಸಂದೇಶ್ ಕಳಿಸಿದ್ದ ಎಸ್‌ಎಮ್‌ಎಸ್(SMS) ಮತ್ತೆ ಮತ್ತೆ ನೆನಪಾಗುತ್ತಿದೆ. 'ಕಣ್ಣಿಂದ ಹರಿದು ಕೆನ್ನೆ ಒದ್ದೆ ಮಾಡುವುದು ಕಣ್ಣಿರಲ್ಲ.. ಬದಲಾಗಿ ಹೃದಯದಿಂದ ಜಾರಿ ಮನಸ್ಸನ್ನು ಆರ್ದ್ರಗೊಳಿಸುವುದೇ ನಿಜವಾದ ಕಣ್ಣೀರು' ಅಬ್ಬಾ ಎಂಥಾ ಸುಂದರ ಕಲ್ಪನೆ. ನೋವಿನಲ್ಲೂ ಸುಖ ಕೊಡುವ ಸಾಲುಗಳಿವು.. ಘಾಸಿಗೊಂಡ ಹೃದಯಕ್ಕೆ ಸಾಂತ್ವನ ನೀಡುವ ಇಂತಹ ಅರ್ಥಭರಿತ ಸಾಲುಗಳು ನಿಜಕ್ಕೂ ಅದ್ಭುತ.

'ಸತ್ಯ ಯಾವತ್ತಿಗೂ ಕಹಿ' ಎಂಬುದನ್ನು ನಾನು ನಂಬಿರಲಿಲ್ಲ. ಅದರೆ ಹೃದಯವನ್ನೇ ಹಿಂಡಿ, ವಾಸ್ತವ ನಗುತ್ತಿರುವಾಗ ನಂಬಿಕೆ ಬದಲಾಗಲೇಬೇಕಿದೆ... ಇಂದು ನನ್ನೆಲ್ಲಾ ಕನಸುಗಳು ಮತ್ತೆಂದೂ ಬಾರದಷ್ಟು ದೂರ ಹೊರಟು ಹೋಗಿವೆ. ಭರವಸೆ, ಆಸೆ, ಆಕಾಂಕ್ಷೆಗಳ ಮೇಲೆ ಕಟ್ಟಿದ್ದ ಪ್ರೀತಿಯ ಅರಮನೆ, ವಾಸ್ತವದ ಬರಸಿಡಿಲಿಗೆ ಬಲಿಯಾಗಿ ಕಣ್ಣೆದುರೇ ಉರುಳಿ ಹೋಗುತ್ತಿದೆ. ಅಸಹಾಯಕತೆಯಿಂದ ಮನಸ್ಸು ರೋದಿಸುತ್ತಿದೆ...

ಈಗ ಉಳಿದಿರುವುದೆಲ್ಲ ಭಗ್ನಾವಷೇಷ ಮಾತ್ರ...ನಂಬಿಕೆಯ ಚೂರು, ಪ್ರೀತಿಯ ಬೂದಿಯ ಮಧ್ಯೆ ಅಳಿಯದೆ ಉಳಿದ ಕನಸುಗಳನ್ನು ಹೆಕ್ಕಿ ತೆಗೆಯುವ ನನ್ನ ವ್ಯರ್ಥ ಪ್ರಯತ್ನ ಕಂಡು ವಿಧಿ ನಕ್ಕಂತಾಯಿತು. ಜೀವನ ಪೂರ್ತಿ ನನ್ನ ಜೊತೆಗಿರಬೇಕೆಂದು ಕಟ್ಟಿದ್ದ ಕನಸು ಇಂದು ಇನ್ಯಾರದೊ ಪಾಲಾಗಿದೆ.. ನನ್ನ ನಿರೀಕ್ಷೆಗೆ ಬೆಂಗಾವಲಾಗಬೇಕಿದ್ದ ಭರವಸೆ ಸೋತು ನೆಲಕಚ್ಚಿದೆ...

ನೋವಿಗೆ ನಗುವಿನ ಮುಖವಾಡ ಧರಿಸಿಯಾದರು ನಾನು ಮತ್ತೆ ಜೀವನ ಯಾತ್ರೆ ಆರಂಭಿಸಲೇಬೇಕಿದೆ. ಆದರೆ ಅದು ಮತ್ತೆ ಹೊಸ ಕನಸನ್ನು ಕಟ್ಟಿ ಬೆಳೆಸುವುದಕಾಗಲ್ಲ ಬದಲಾಗಿ ಕಳೆದುಕೊಂಡ ಕನಸಿನ ನೆನಪನ್ನು ಸದಾ ಹಸಿರಾಗಿರಿಸುವುದಕ್ಕಾಗಿ...... ಆ ನೆನಪಲ್ಲೇ ಉಳಿದ ಉಸಿರನ್ನು ಕಾಪಾಡುವುದಕ್ಕಾಗಿ.... ನಾನು ಬದುಕಲೇಬೇಕಾಗಿದೆ... ಪ್ರೀತಿಯ ನೆನಪಿಪಾಗಿ...