Monday, 19 November 2007

"ಮೌನ ಮಾತನಾಡುವುದಿಲ್ಲ..."

"ನಿನ್ನ ಮೌನವನ್ನು ಅರ್ಥಮಾಡಿಕೊಳ್ಳದವರು ನಿನ್ನ ಮಾತುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.."
ಗೆಳೆಯನೊಬ್ಬ ಕಳುಹಿಸಿದ ಈ ಎಸ್ಸೆಮ್ಮೆಸ್ ನ್ನು ಮತ್ತೆ ಮತ್ತೆ ಓದಿಕೊಂಡೆ...
ಮನದಲ್ಲೇನೋ ಸಂಶಯ.! ಈ ಮಾತು ನಿಜವೇ..?
ಹಾಗಾದರೆ ಎಲ್ಲರಿಗೂ ಮೌನದ ಭಾಷೆ ಅರ್ಥವಾಗುತ್ತದೆಯೇ?
ಇಲ್ಲ... ಖಂಡಿತಾ ಇಲ್ಲ...ಯೋಚಿಸಿದಷ್ಟೂ ಮನಸ್ಸು ಗೊಂದಲದ ಗೂಡಾಗುತ್ತಿದೆ.. ಉತ್ತರ ಮಾತ್ರ ಸಿಗುತ್ತಿಲ್ಲ..


ನಗೇ ಅರಿವಿಲ್ಲದಂತೆ ಮನಸ್ಸು ಮತ್ತೆ ಅವಳ ನೆನಪನ್ನು ಕೆದಕಲಾರಂಬಿಸಿತು. ನನ್ನೆಲ್ಲಾ ಮಾತನ್ನು ಮೌನವಾಗಿಸಿ ಕೊನೆಗೆ ಆ ಮೌನದ ನೆನಪೊಂದನ್ನೇ ನನ್ನ ಪಾಲಿಗೆ ಉಳಿಸಿ ಹೋದವಳವಳು. ಅವಳ ನಗುವಿನ ಸುಂದರ ಸ್ಮೃತಿ ಮನದಲ್ಲಿ ಮೂಡುತ್ತಿದ್ದಂತೆಯೇ, ಇಷ್ಟು ವರ್ಷಗಳಿಂದ ಹೃದಯದಲ್ಲಿ ಉಳಿಸಿಕೊಂಡಿದ್ದ ಮಾತುಗಳೆಲ್ಲವೂ ಮೌನದ ಪೊರೆಯನ್ನು ಭೇದಿಸಿ ನನ್ನನ್ನು ನೋವಿನ ಮಡುವಿನಲ್ಲಿ ಮುಳುಗಿಸಿದಂತಾಯ್ತು.. ಹೇಳಲಾಗದ ಅವ್ಯಕ್ತ ಯಾತನೆ..
ಅವಳ ನೆನಪೆಂದರೆ ಹಾಗೇನೆ.. ಕೇವಲ ನೋವು ಮಾತ್ರ ತುಂಬಿದ್ದರೂ ಕೂಡಾ ಅದು ಮಧುರ...ಅಬ್ಬಾ!ಎಷ್ಟೊಂದು ಮಾತುಗಳಿದ್ದವು ನನ್ನಲ್ಲಿ.. ಅವಳು ನಕ್ಕಾಗ "ಮುದ್ದಾಗಿ ಕಾಣುತ್ತಿ" ಅನ್ನಬೇಕಿತ್ತು. ಅತ್ತಾಗ "ನಾನಿದ್ದೇನೆ ಅಳಬೇಡ" ಎಂದು ಹೇಳಬೇಕಿತ್ತು. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ನನ್ನನ್ನು ಗೋಳು ಹೊಯ್ದುಕೊಳ್ಳುವಾಗ "ಸದಾ ಹೀಗೆ ನನ್ನ ಜೊತೆಗಿರು" ಅನ್ನಬೇಕಿತ್ತು.. ಆದರೆ ಈ ಯಾವ ಮಾತುಗಳೂ ನನ್ನ ತುಟಿಯನ್ನು ದಾಟಲೇ ಇಲ್ಲ.. ಅವಳ ಮುಗ್ಧ ಸೌಂದರ್ಯದೆದುರು ನನ್ನ ಮಾತುಗಳಿಗೆ ಧ್ವನಿಯಾಗುವ ತಾಕತ್ತು ಬರಲೇ ಇಲ್ಲ.. ಅದು ಮೌನವಾಗಿಯೇ ಎದೆಗೂಡು ಸೇರಿಕೊಂಡುಬಿಟ್ಟಿತ್ತು...

ಪ್ರತೀ ಹಂತದಲ್ಲೂ ಅವಳೆದುರು ಮಾತನಾಡಲಾಗದೆ ಸೋತು, ಅವಳನ್ನೂ ಸಂಪೂರ್ಣವಾಗಿ ಕಳೆದುಕೊಂಡು , ಕೇವಲ ನೆನಪುಗಳಲ್ಲೇ ಅವಳೊಂದಿಗಿದ್ದು ಬಿಡುವ ಹುಂಬತನಕ್ಕೆ ಈಗಾಗಲೇ ಒಗ್ಗಿಕೊಂಡಿರುವ ನನಗೆ ಅವಳ ನೆನಪು ಕೆದಕಿದ ಗೆಳೆಯನ ಎಸ್ಸೆಮ್ಮೆಸ್ ಮೇಲೆ ಅಗಾಧ ಸಿಟ್ಟು ಬಂದುಬಿಟ್ಟಿತ್ತು. ತಕ್ಷಣ ಅದನ್ನು ಡಿಲೀಟ್ ಮಾಡಿದೆ. ಮನಸ್ಸೇಕೋ ನಿರಾಳವೆನಿಸಿತು. ಈಗ ಮೊಬೈಲ್‌ನ ಇನ್‌ಬಾಕ್ಸ್‌ನಂತೆ ನನ್ನ ಮನಸ್ಸೂ ಖಾಲಿ ಖಾಲಿ.. ಆದರೆ ಇದು ಕ್ಷಣಿಕ.. ಮತ್ತೆ ಇನ್ನೊಂದು ಎಸ್ಸೆಮ್ಮೆಸ್ ಬಂದು ಅವಳ ನೆನಪನ್ನು ಕದಡುವವರೆಗೆ ಮಾತ್ರ.. ನಂತರ ಮತ್ತದೇ ಗೊಂದಲ... ನೋವು.. ಮಧುರ ಯಾತನೆ...

Sunday, 18 November 2007

"ಐ ಲವ್ ಯೂ"- ಮೊದಲ ಮಾತೇ...ಕೊನೆಯ ಮಾತೇ...?

ಮಹಿಳೆಯರು ಕೇಳಲು ಅತ್ಯಂತ ಇಷ್ಟಪಡುವ ಮೂರು ಶಬ್ದಗಳು ಯಾವುವು?
ಅರೆ.. ಯಾವುದಪ್ಪಾ ಅದು ಎಂದು ಯೋಚಿಸುತ್ತಿದ್ದೀರಾ... ಸ್ವಲ್ಪ ಪ್ರಯತ್ನಪಡಿ...
ಹ್ಞಾಂ !...ಅದೇ...
ನಿಮ್ಮ ಉತ್ತರ ಐ..... ಲವ್...... ಯೂ.... ಎಂದಾಗಿದ್ದಲ್ಲಿ ನೀವು ಸರಿಯಾಗಿಯೆ ಊಹಿಸಿದ್ದೀರಿ ಬಿಡಿ...

ಸಾಮಾನ್ಯವಾಗಿ, ನಾವೆಲ್ಲಾ ತಿಳಿದುಕೊಂಡಿರುವಂತೆ ಎಲ್ಲಾ ಮಹಿಳೆಯರೂ ತಮಗೊಪ್ಪುವ 'ರೋಮ್ಯಾಂಟಿಕ್' ಪುರುಷರಿಂದ 'ಐ ಲವ್ ಯೂ' ಎಂಬ ಅಮೂಲ್ಯ ಶಬ್ಧಗಳನ್ನು ಕೇಳಲು ಇಚ್ಚಿಸುತ್ತಾರೆ. ಸರಿ ತಾನೆ?

ಆದರೆ ಸ್ನೇಹಿತರೆ, ಈ ಬಾವನೆ ತಪ್ಪು. ಒಂದು ವೇಳೆ ನೀವು ಹಾಗಂದುಕೊಂಡಿದ್ದರೆ ಅದು ಖಂಡಿತವಾಗಿಯೂ ತಪ್ಪು...

ಅರೆ... ಇವನ್ಯಾವನಪ್ಪ... ತಲೆ ಕೆರ್ಕೊಂಡು ನಮ್ ಮುಂದೆ ಈ ರೀತಿ ಕುಯ್ಯುತ್ತಿದ್ದಾನಲ್ಲಾ ಅನ್ತೀರಾ... ಹಾಗಾದ್ರೆ ತಡೀರಿ, ಮುಂದೆ ಓದಿ...

ಒಬ್ಬರನ್ನು 'ಪ್ರೀತಿ'ಸುವುದು ಎಂಬ ದೃಷ್ಟಿಕೋನವೇ ಮಾನವನ ಕಲ್ಪನೆಗೆ ನಿಲುಕದ್ದು. ಹಾಗಿರುವಾಗ ಅದನ್ನು ಹೇಳಲು ಆತುರಪಡುವುದು ಹೇಗೆ ತಾನೆ ಸಮಂಜಸವಾದೀತು...? ಈ ಕುರಿತು ಯಾವತ್ತಾದರೂ ಯೋಚಿಸಿದ್ದೀರಾ?

''ಐ ಲವ್ ಯೂ'' ಎಂಬ ಸಮ್ಮೋಹಕ ಶಬ್ದ ಎಷ್ಟು ಬೇಗ ನಿಮ್ಮ ತುಟಿ ದಾಟಿ ಹೊರ ಬರುತ್ತದೋ ಅಷ್ಟು ಬೇಗ ನೀವು ಕಳೆದುಕೊಳ್ಳಲು ಸಿದ್ಧವಾಗಬೇಕಾಗುತ್ತದೆ. ನಿಮ್ಮ ಮೇಲೆ ಆಕೆಗಿರುವ ಆಕರ್ಷಣೆ ಅಷ್ಟು ಬೇಗ ಚದುರಿಹೋಗುತ್ತದೆ.

ಸ್ನೇಹಿತರೆ, ಗಮನವಿಟ್ಟು ಕೇಳಿ.-ಸೆಕ್ಸ್ ಎನ್ನುವುದು ಗಂಡಸರ ಪಾಲಿಗೆ ಒಂದು ಪ್ರಾಥಮಿಕ ದೈಹಿಕ ಅಗತ್ಯವಾದರೆ, ಮಹಿಳೆಯರಿಗೆ ಅದು ಭಾವನಾತ್ಮಕ ಅವಶ್ಯಕತೆ. ಇದನ್ನ ಯಾವತ್ತೂ ಮರೆಯಬೇಡಿ..!

ಯಾವಾಗ ಒಬ್ಬ ಪುರುಷ ಮಹಿಳೆಯೆಡೆಗೆ ಆಕರ್ಷಿತನಾಗುತ್ತಾನೋ ಅಂದಿನಿಂದಲೆ ಈ ಮೂರು ಸಮ್ಮೋಹಕ ಶಬ್ದಗಳನ್ನು ಆಕೆಯ ಕಿವಿಯಲ್ಲಿ ಉಸುರಲು ತವಕಿಸಲಾರಂಭಿಸುತ್ತಾನೆ. ಇದರಿಂದ ತಾನು ಆಕೆಯ ಪ್ರೀತಿಯನ್ನು ಗಳಿಸುತ್ತೇನೆಂಬ ಹುಚ್ಚು ಭ್ರಮೆಯಲ್ಲಿ ಬೀಳುತ್ತಾನೆ. ಆದರೆ ಒಂದು ಬಾರಿ ಆತ ಅವಸರಪಟ್ಟು ಈ ಶಬ್ದಗಳನ್ನು ಹೇಳಿದರೆ.....,
ಉ ಹುಂ.... ಅಲ್ಲಿ ನಡೆಯುವುದೇ ಬೇರೆ. ಅದು ಆತ ಅಂದುಕೊಂಡದ್ದಕ್ಕೆ ವಿರುದ್ಧವಾಗಿರುತ್ತದೆಂಬುದೇ ದುರಂತ...

ಸಹಜವಾಗಿಯೆ ಮಹಿಳೆಯರು ತಮ್ಮ ನಿರ್ಧಾರಗಳನ್ನು ವಿಸ್ಮಯಕಾರಿ ಅದೃಷ್ಟದಾಟಕ್ಕೆ ಬಿಟ್ಟುಬಿಡುತ್ತಾರೆ. ಒಬ್ಬ ಮಹಿಳೆಗೆ ನಿಜವಾಗಿಯೂ ಬೇಕಾಗಿರುವುದು ನೀವು ಬಾಯಿಬಿಟ್ಟು ಹೇಳುವ 'ಐ ಲವ್ ಯೂ' ಎಂಬ ಮೂರು ಸಮ್ಮೋಹಕ ಶಬ್ದಗಳಲ್ಲ. ಬದಲಾಗಿ ನೀವು ಆಕೆಯನ್ನು ಇಷ್ಟಪಡುತ್ತಿದ್ದೀರಿ ಎಂಬ ಸಣ್ಣ ಸುಳಿವು ಮಾತ್ರ.. ಆಕೆಯ ಭಾವನಾತ್ಮಕ ಅವಶ್ಯಕತೆಯನ್ನು ಪೂರೈಸಲು ಇವಿಷ್ಟೇ ಸಾಕು. ಆದರೆ ಈ ಸುಳಿವನ್ನು ನಿಮ್ಮ ವರ್ತನೆಯಿಂದ, ಭಾವನೆಗಳಿಂದ ವ್ಯಕ್ತಪಡಿಸಬೇಕೆ ವಿನಃ ಮಾತುಗಳಿಂದಲ್ಲ...

ಹಾಗಾದರೆ ನೀವು ಮಾಡಬೇಕಾಗಿರುವುದೇನು?

ಇದಪ್ಪಾ 'ಮಿಲಿಯನ್ ಡಾಲರ್' ಪ್ರಶ್ನೆ... ನೀವೇನು ಮಾಡಬಹುದು...?
ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಸಾಕು...ನೀವು ಆಕೆಯ ಆಕರ್ಷಣೆಯ ನಿಯಂತ್ರಣದಲ್ಲಿದ್ದೀರಿ, ನಿಮ್ಮನ್ನು ಆಕೆ ಯಾವಾಗ ಬೇಕಾದರೂ ಹೊಂದಬಹುದೆಂಬ ಸತ್ಯ ಆಕೆಯ ಮನದಲ್ಲಿ ಮೂಡಬಾರದು. ಒಂದು ವೇಳೆ ಹಾಗಾದಲ್ಲಿ ನೀವು ದುರಂತವೊಂದಕ್ಕೆ ದಾರಿಮಾಡಿಕೊಟ್ಟಿರೆಂದೇ ಅರ್ಥ. ಈ ಸತ್ಯ ಆಕೆಗೆ ತಿಳಿದ ತಕ್ಷಣ ನೀವು ತನ್ನನ್ನು ಪ್ರೀತಿಸುತ್ತಿದ್ದೀರೊ, ಇಲ್ಲವೋ ಎಂಬ ಆಕೆಯ ಕುತೂಹಲ ಮಾಯವಾಗುತ್ತದೆ. ಆಕೆಯ ನಿರೀಕ್ಷೆಗೆ, ಕಾಯುವಿಕೆಗಳಿಗ್ಯಾವುದಕ್ಕೂ ಅರ್ಥವಿರುವುದಿಲ್ಲ. ಇನ್ನು ಸಂಭ್ರಮದ ಘಳಿಗೆಗಳಂತೂ ತೀರಾ ಸಪ್ಪೆಯಾಗಿಬಿಡುತ್ತವೆ. ಈ ಅಂಶಗಳೇ ಇಬ್ಬರನ್ನು ಒಂದೆಡೆ ಹಿಡಿದಿಡುವುದು. ಇವೆ ಇಲ್ಲಾ ಎಂದರೆ? ಅಲ್ಲಿಗೆ ಮುಗಿಯಿತು ನಿಮ್ಮ ಸಂಬಂಧ. ಹೇಳಿ ಕೇಳಿ ಒಂದು ಬಾಂಧವ್ಯವೆಂದ ಮೇಲೆ ಅಲ್ಲಿ ಕೊಂಚವಾದರೂ ಆಕರ್ಷಣೆಯಿರದಿದ್ದರೆ ಹೇಗೆ? ನೀವೆ ಹೇಳಿ?

ಮಧುರ ಬಾಂಧವ್ಯದ ಆರಂಭದ ಹಂತ...

ನಾನು ಆಕೆಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೇನೆ.. ಮುಂದೇನು? ಪ್ರಾಯಶಃ ನೀವು ನಿಮ್ಮನ್ನೇ ಎಷ್ಟೋ ಬಾರಿ ಈ ಪ್ರಶ್ನೆ ಕೇಳಿಕೊಂಡಿರಬಹುದು. ಅದಕ್ಕೊಂದು ಸರಳವಾದ ಆದರೆ ಅಷ್ಟೇ ಪರಿಣಾಮಕಾರಿಯಾದ ಪರಿಹಾರವಿದೆ. ನಿಮ್ಮ ಪ್ರೀತಿಯನ್ನ ಆಕೆಗೆ ಹೇಳಬೇಡಿ. ಮಾತು ತುಂಬಾ ಅಗ್ಗ, ಆದರೆ ನಮ್ಮ ಕಾರ್ಯಗಳು ಹಾಗಲ್ಲ. ಅದಕ್ಕೆ ಅದರದ್ದೇ ಆದ ತೂಕವಿದೆ. ತುಂಬಾ ಕಾಲ ಇನ್ಯಾರದೋ ನೆನಪಿನ ಪುಟಗಳಲ್ಲಿ ನೆಲೆನಿಲ್ಲುವ ತಾಕತ್ತಿದೆ. ಮಾತಿಗೆ ಈ ಶಕ್ತಿಯಿಲ್ಲ. ನಿಮ್ಮ ಪ್ರೀತಿಯನ್ನ ಆಕೆಗೆ ಹೇಳಬೇಡಿ. ಬದಲಿಗೆ ಆಕೆಗೆ ನಿಮ್ಮ ಪ್ರೀತಿಯನ್ನ ಅನುಭವಿಸಲು ಬಿಡಿ. ನಿಮ್ಮ ಕಾರ್ಯಗಳ ಮೂಲಕ, ವರ್ತನೆಗಳ ಮೂಲಕ ಅದನ್ನಾಕೆಗೆ ಮನವರಿಕೆ ಮಾಡಿಕೊಡಿ. ನೀವಾಕೆಗೆ ಸಾಕಷ್ಟು ಗಮನಕೊಡುತ್ತೀರಿ ಎಂಬುದನ್ನ ಮನದಟ್ಟು ಮಾಡಿಸಿ. ನಿಮ್ಮ ಸಾಂಗತ್ಯದ ಸವಿಯನ್ನ ಕ್ಷಣಕ್ಷಣವೂ ಅನುಭವಿಸಲು ಬಿಡಿ. ಜೊತೆಗೆ...ಆಕೆಯಿಲ್ಲದೆ ನೀವು ಬದುಕಬಲ್ಲಿರಿ ಎಂಬ ವಾಸ್ತವನ್ನೂ ತಿಳಿಸಿಕೊಡಿ. ಬಾಂಧವ್ಯವನ್ನು ಯಾವಾಗಲೂ ಜೀವಂತಿಕೆಯಿಂದಿಡಿ. ಇದೇ ಆಕೆಯ ದೃಷ್ಟಿಯಲ್ಲಿ ನಿಮ್ಮನ್ನು ಆಕರ್ಷಕ ವ್ಯಕ್ತಿಯನ್ನಾಗಿಸುವುದು. ಮಹಿಳೆಯರು ಯಾವಾಗಲೂ ಆಕರ್ಷಕ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ. ಕಾರ್ಯಪ್ರವೃತ್ತ ಚಾಣಾಕ್ಷರನ್ನ ಮೆಚ್ಚಿಕೊಳ್ಳುತ್ತಾರೆ. ಅದು ಬಿಟ್ಟು ಭಾವನಾತ್ಮಕವಾಗಿ ದುರ್ಬಲರಾದವರನ್ನಲ್ಲ. ಹೆಂಗರಳು ಹೊಂದಿರುವ ಪರರುಷರನ್ನಂತೂ ಮೊದಲೇ ಅಲ್ಲಾ...
ನೀವು ಯಾರನ್ನಾದರೂ ಇಷ್ಟಪಡುತ್ತೀರಿ ಎಂದರೆ, ಅದನ್ನಾಕೆಗೆ ಹೇಳಲೇ ಬೇಕೆಂದು ಆತುರಪಡುತ್ತಿದ್ದರೆ, ಸ್ವಲ್ಪ ನಿಲ್ಲಿ. ನಿಮ್ಮ ಪ್ರೀತಿ ಆಕೆಗೆ ಅರ್ಥವಾಗುವವರೆಗೆ ಸುಮ್ಮನಿದ್ದುಬಿಡಿ. ಇದು ಮೂರ್ಖತನವೆನಿಸುತ್ತಿದೆಯೆ? ಆದರೆ ಒಂದು ತಿಳಿದುಕೊಳ್ಳಿ. ಬಾಂಧವ್ಯ ಮಧುರವಾಗಿರಬೇಕಾದರೆ ಕಾಯುವಿಕೆ ಅನಿವಾರ್ಯ. ಅಷ್ಟರವರೆಗೆ ಆಕೆ ತನ್ನ ಭಾವನೆಗಳನ್ನ ತನ್ನ ಸ್ನೇಹಿತೆಯರಲ್ಲಿ ಹಂಚಿಕೊಳ್ಳಬೇಕೆ ವಿನಃ ನಿಮ್ಮಲ್ಲಲ್ಲ. ತೀರಾ ಅಷ್ಟರ ಮಟ್ಟಿಗೆ ಆಕೆಯನ್ನ ಕಾಡಿದರೆ ನಿಮ್ಮ ಅರಳುತ್ತಿರುವ ನಿಮ್ಮ ಬಾಂಧವ್ಯಕ್ಕೆ ನೀವೇ ಕೊಳ್ಳಿಯಿಟ್ಟಂತಾದೀತು ಎಚ್ಚರ...

ಆದರೆ ಇಲ್ಲೊಂದು ಸಣ್ಣ ಸಮಸ್ಯೆಯಿದೆ. ಬಹಳಷ್ಟು ಪುರುಷರು ಬಾವನಾತ್ಮಕವಾಗಿ ದುರ್ಬಲರು. ಇದಕ್ಕೆ ವಿರುದ್ಧವಾಗಿ ಮಹಿಳೆಯರು ಸವಾಲುಗಳನ್ನು ಎದುರಿಸುವಂತಹ ಪುರುಷರನ್ನು ಇಷ್ಟಪಡುತ್ತಾರೆಯೆ ಹೊರತು, ನಿನ್ನನ್ನು ಪ್ರೀತಿಸುತ್ತೇನೆ ಎಂದು ಆಕೆಯ ಹಿಂದೆ ಠಾಂ,ಠಾಂ ಹೊಡೆದುಕೊಂಡು ಸುತ್ತುವವರನ್ನಲ್ಲ. ಆದ್ದರಿಂದ ಈ ಕುರಿತು ನಿರ್ಧರಿಸುವ ಮೊದಲು ಕೆಳಗೆ ಹೇಳಿರುವ ಎರಡು ಅಂಶಗಳನ್ನು ಗಮನಿಸಿ...
1) ನೀವು ಆಕೆಯೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿಲ್ಲವೆಂದರೆ, ನೀವಾಕೆಗೆ 'ಐ ಲವ್ ಯೂ' ಹೇಳಲೇಕೂಡದು. (ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಡೆಯುವಂತೆ, ನೀವಿಬ್ಬರು ಕೇವಲ ಸ್ನೇಹಿತರಾಗಿದ್ದು, ನೀವೊಬ್ಬರೇ ಏಕಮುಖವಾಗಿ ಆಕೆಯನ್ನು ಪ್ರೀತಿಸುತ್ತಿದ್ದರೆ ಅದನ್ನಾಕೆಗೆ ಹೇಳದಿರುವುದೇ ಒಳಿತು.)
2) ಒಂದು ವೇಳೆ ಆಕೆಯೆ ಮೊದಲು 'ಐ ಲವ್ ಯೂ' ಹೇಳಿದರೆ, ಸುಮ್ಮನೆ 'ನನಗದು ಗೊತ್ತು' ಎಂದು ಬಿಡಿ. ಇದು ನಿಮ್ಮಿಬ್ಬರ ನಡುವಿನ ಬಾಂಧವ್ಯದಲ್ಲಿ ಕುತೂಹಲ, ಆಕರ್ಷಣೆಯನ್ನು ಉಳಿಸಿಕೊಂಡು ಮುಂದೆ ಅನಿಯಮಿತ ಆತ್ಮೀಯತೆಯನ್ನು ಕಟ್ಟಿಕೊಡಲು ನೆರವಾಗುತ್ತದೆ.

'ಪ್ರೀತಿ' ಎಂಬುದು ದಿನಗಳೆದಂತೆ ಸತ್ವಯುತವಾಗಿ ಬೆಳೆಯುವ ಒಂದು ಅನನ್ಯ ಅನುಭೂತಿ. ಅದು ಸಂಬಂಧವೊಂದನ್ನು ಮುಂದುವರಿಸಿಕೊಂಡು ಹೋಗಲು ನಮ್ಮ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಬೇಡುತ್ತದೆ. ಪ್ರೀತಿಯೆಂಬುದು ಕೇವಲ ಒಂದು ರಾತ್ರಿಯಲ್ಲಿ ಅಂಕುರವಾಗುವಂತಹ ಸಸಿಯಲ್ಲ. ಅದು ಎಷ್ಟೋ ವರ್ಷಗಳ ಕಾಯುವಿಕೆ ಫಲ. ಆದ್ದರಿಂದ ಇನ್ನು ಮುಂದೆ ಆಕೆಗೆ ನೀವು-'ನೀನು ನನ್ನನ್ನ ಇಷ್ಟಪಡುತ್ತಿ ಎಂಬುದು ಗೊತ್ತು 'ಎಂದು ಹೇಳುವ ಸನ್ನಿವೇಶ ನಿರ್ಮಿಸಿಕೊಳ್ಳಬೇಕೆ ವಿನಃ, 'ನಾನು ನಿನ್ನನ್ನು ಪ್ರೀತಿಸುತ್ತೇನೆ 'ಎಂಬಂತಹ ಪರಿಸ್ಥಿತಿಯನ್ನಲ್ಲ. ಒಂದು ವೇಳೆ ಇದನ್ನೆಲ್ಲಾ ಮೀರಿ ನೀವು ಆಕೆಗೆ 'ಐ ಲವ್ ಯೂ' ಹೇಳಲೇಬೇಕೆಂದರೆ ಅದಕ್ಕೆ ಸೂಕ್ತ ಸಮಯ, ಒಂದೋ ನಿಮ್ಮಿಬ್ಬರ ಮದುವೆಯ ದಿನ ಅಥವಾ ನಿಮ್ಮಿಬ್ಬರಲ್ಲೊಬ್ಬರ ಜೀವನದ 'ಕೊನೆಯ' ದಿನ...
ಯೋಚಿಸಿ...