Thursday 18 December 2008

ಒದ್ದೆ ಮರಳಿನ ಮೇಲೆ...


ನುರ್ಮಾಸದ ಚಳಿ ತಣ್ಣಗೆ ಮೈಕೊರೆಯುತ್ತಿತ್ತು. ಮೈಮೇಲೆ ಹೊದ್ದಿದ್ದ ಬ್ಲಾಂಕೆಟ್ ಚಳಿಗೆ ಶರಣಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದವು. ಆದರೆ ದೇಹವನ್ನು ಕೊರೆಯುತ್ತಿದ್ದ ಚಳಿಯಿಂದ ತಪ್ಪಿಸಿಕೊಳ್ಳಲು ಮೈಬೆಚ್ಚಗಿರಿಸಿಕೊಳ್ಳುವ ಗೊಡವೆ ಬೇಡವೆನಿಸಿತ್ತು. ಅಲ್ಲೇ... ಹಾಸಿಗೆಯ ಸನಿಹವೇ ಬಿದ್ದಿದ್ದ ಮೊಬೈಲ್‌ನಿಂದ ಹೊರಡುವ ಒಂದು ಸಣ್ಣ ಸದ್ದಿಗಾಗಿ ಮೈಯನ್ನೆಲ್ಲಾ ಕಿವಿಯಾಗಿಸಿಕೊಂಡು ಕಾಯುತ್ತಿದ್ದೆ. ಆದರೆ ಅದೂ ನನ್ನಂತೆಯೆ ನೀರವ ಮೌನದ ರಾತ್ರಿಯಲ್ಲಿ ಕಳೆದುಹೋಗಿತ್ತು.
***
ನೋ ಅಸ್ಪಷ್ಟ ಸದ್ದು... ಆಗಷ್ಟೆ ನಿದ್ರಾದೇವಿಯ ಅದರಾಮೃತವನ್ನು ಸವಿಯುತ್ತಿದ್ದ ರೆಪ್ಪೆಗಳನ್ನು ಒಲ್ಲದ ಮನಸ್ಸಿನಿಂದ ತೆರೆದಾಗ ಮೊಬೈಲ್ ಕಣ್ಣಿಗೆ ಬಿತ್ತು. ಅದರ ಪರದೆಯ ಮೇಲೆ ಮಿಂಚುತ್ತಿದ್ದ ಹೆಸರನ್ನು ನೋಡಿದೊಡನೆಯೇ ನಿದ್ರಾ ನಶೆ ಇಳಿದುಹೋಗಿತ್ತು. 'ಸಾಕ್ಷಿ...' ರಿಸೀವ್ ಬಟನ್ ಅದುಮುವ ಮುನ್ನ ಆ ಹೆಸರನ್ನೊಮ್ಮೆ ಮೆಲುವಾಗಿ ಮುದ್ದಿಸಿದೆ. ಹಲೋ ಎಂದೊಡನೆಯೇ, "ನಿನ್ನ ಜೊತೆ ಮಾತನಾಡಬೇಕಿದೆ. ಸಾಯಂಕಾಲ ಬೀಚ್ ಬಳಿ ಸಿಕ್ತಿಯಾ?" ಎಂದವಳಿಗೆ ಸರಿ ಎಂದೆ. ಇನ್ನೇನೋ ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಫೋನ್ ಕಟ್ ಆಗಿತ್ತು.
ನಿನ್ನೆ, "ಸಾಕ್ಷಿ... ಯಾಕೋ ಗೊತ್ತಿಲ್ಲಾ? ಇತ್ತೀಚೆಗೆ ಪ್ರತಿ ಕ್ಷಣವೂ ನಿನ್ನೊಂದಿಗಿರಬೇಕೆಂದು ಅನ್ನಿಸುತ್ತಿದೆ. ಕಳೆದ ಆರು ವರ್ಷಗಳಿಂದ ನೀನು ನನ್ನ ಸ್ನೇಹಿತೆಯಾಗಿದ್ದೆ. ಆದರೆ ಕೆಲವು ದಿನಗಳಿಂದ ನಮ್ಮಿಬ್ಬರ ಸಂಬಂಧ ಸ್ನೇಹವನ್ನು ಮೀರಿದ್ದು ಎಂದು ನನಗನ್ನಿಸುತ್ತಿದೆ. ನೀನು ನನ್ನನ್ನು ಮದುವೆಯಾಗುತ್ತೀಯಾ?" ಎಂದು ನೇರವಾಗಿ ಕೇಳಿದಾಗ ಅರೆಕ್ಷಣ ನನ್ನ ಮುಖವನ್ನೇ ದಿಟ್ಟಿಸಿ ನೋಡಿ ಏನೂ ಹೇಳದೆ ಹೊರಟು ಹೋದವಳು, ಈಗ ಮಾತನಾಡಬೇಕಿದೆ ಎನ್ನುತ್ತಿದ್ದಾಳೆಂದರೆ... ಪ್ರಾಯಶಃ ಆ ಕುರಿತೇ ಇರಬೇಕು.
***
ಸಾಗರದ ಅಲೆಗಳ ಹೊಯ್ದಾಟಕ್ಕೂ ನನ್ನ ಮನಸ್ಥಿತಿಗೂ ತಾಳೆ ಹಾಕುತ್ತಾ ಕುಳಿತಿದ್ದೆ. ಚಳಿಗಾಲದ ರಾತ್ರಿ ಬೇಗ ಮನೆಸೇರಿ, ಬೆಚ್ಚಗೆ ಹೊದ್ದುಕೊಂಡು ಮಲಗುವ ತವಕದಲ್ಲಿರುವಂತೆ ಸೂರ್ಯ ಅವಸರದಿಂದ ದಿಗಂತದತ್ತ ಓಡುತ್ತಿದ್ದ.. ಸೂರ್ಯನಿಗೂ ಚಳಿಯೇ? ನನ್ನ ಹುಚ್ಚು ಕಲ್ಪನೆ ನನಗೇ ನಗು ತರಿಸಿತು. ಆದರೆ ತುಟಿಯಂಚಿನವರೆಗೆ ಬಂದ ನಗು ಅಲ್ಲೇ ಮರೆಯಾಗಿ "ಸಾಕ್ಷಿ..." ಎನ್ನುವ ಉದ್ಗಾರವಾಗಿ ಬದಲಾಯ್ತು. ಹೌದು... ಆಕೆ ನಿಧಾನವಾಗಿ ನನ್ನತ್ತಲೇ ನಡೆದು ಬರುತ್ತಿದ್ದಾಳೆ. ಉಸಿರಾಡುವುದನ್ನು ಹೊರತುಪಡಿಸಿ ಮತ್ತೆಲ್ಲವನ್ನೂ ಮರೆತ ಸ್ಥಿತಿ. ಪ್ರಾಯಶಃ ಸಮಾಧಿ ಸ್ಥಿತಿ ಎನ್ನುವುದು ಇದಕ್ಕೇ ಏನೋ? ಗಾಳಿಗೆ ಹಾರುತ್ತಿದ್ದ ಮುಂಗುರುಳನ್ನು ಒಂಥರಾ ಅಸಡ್ಡೆಯಿಂದ ಅದರ ಪಾಡಿಗೆ ಬಿಟ್ಟು ನಡೆದು ಬಂದ ಸಾಕ್ಷಿ ನನ್ನ ಮುಂದೆ ನಿಂತು, "ಬಂದು ತುಂಬಾ ಹೊತ್ತಾಯ್ತ?" ಎಂದು ಕೇಳಿದಾಗಲಷ್ಟೆ ವಾಸ್ತವ ಪ್ರಪಂಚಕ್ಕೆ ಮರಳಿದ್ದು. "ಇಲ್ಲಾ... ಸ್ವಲ್ಪ ಹೊತ್ತಾಯಿತಷ್ಟೇ? ಹೇಳು. ಯಾಕೆ ಬರೋಕೆ ಹೇಳ್ದೆ?" ಎಂಬ ವಾಕ್ಯವನ್ನು ಗಂಟಲು ದಾಟಿಸುವಷ್ಟರಲ್ಲಿ ನಾಲಗೆ ಒಣಗಿತ್ತು. ಎದೆಯಾಳದಲ್ಲೆಲ್ಲೋ ವಿಲಕ್ಷಣ ಚಡಪಡಿಕೆ... ಅರೆ! ದಿನವೂ ಇಷ್ಟವಾಗುತ್ತಿದ್ದ ಅವಳ ಸಾನ್ನಿಧ್ಯ ಇಂದೇಕೋ ತಳಮಳ ಉಂಟುಮಾಡುತ್ತಿದೆಯಲ್ಲಾ...
"ನಾವಿಬ್ಬರೂ ಸ್ನೇಹಿತರಾಗಿದ್ದಾಗ ನಾನು ಯಾವಾಗ, ಯಾಕೆ ಬರೋಕೆ ಹೇಳ್ತೀನಿ ಅಂತಾ ನಾನು ಹೇಳದೆ ನಿನಗೆ ಗೊತ್ತಾಗುತ್ತಿತ್ತು. ಆದರೆ ಇಂದು ನೀನು ನನ್ನನ್ನೇ ಪ್ರಶ್ನೆ ಮಾಡ್ತಿರೋದು ನೋಡಿದ್ರೆ ಪ್ರಾಯಶಃ ನಾನು ಒಬ್ಬ ಒಳ್ಳೆ ಸ್ನೇಹಿತನನ್ನು ಕಳೆದುಕೊಂಡೆ ಅಂತಾ ಅನ್ನಿಸ್ತಿದೆ." ಆಕೆಯ ಮಾತಿನಲ್ಲಿ ಎದೆ ಬಡಿತವನ್ನೇ ಸ್ತಬ್ಧಗೊಳಿಸುವಂಥ ತೀಕ್ಷ್ಣತೆ. ಈವರೆಗೆ ನನ್ನ ಸಾಕ್ಷಿ ಇಷ್ಟು ಕಠಿಣವಾಗಿ ಮಾತನಾಡಿರಲಿಲ್ಲ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನನ್ನ ಬಾಯಿಂದ ಮಾತೇ ಹೊರಡುತ್ತಿಲ್ಲ!
ಏನಾಗುತ್ತಿದೆ ನನಗೆ. ಭೇಟಿಯಾದೊಡನೆ ಆಕೆಯನ್ನು ಕೆಣಕಿ ಸಿಟ್ಟು ತರಿಸುತ್ತಿದ್ದ, ಹುಸಿಕೋಪದಿಂದ ಸಾಕ್ಷಿ ಜಗಳಕ್ಕಿಳಿದಾಗ ತಲೆ ನೇವರಿಸಿ ಸಂತೈಸುತ್ತಿದ್ದ ನನಗೆ ಇಂದೇನಾಗಿದೆ? ಇಂದು ಅವಳನ್ನು ಸ್ಪರ್ಶಿಸುವುದಿರಲಿ, ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವೂ ನನ್ನಲ್ಲಿ ಉಳಿದಿಲ್ಲ. ತಲೆ ಹೋಳಾಗುವಂತಾಗುತ್ತಿದೆ. ಆ ಬಟ್ಟಲು ಕಂಗಳು ಮೊನಚಾದ ನೋಟವನ್ನು ಎದುರಿಸಲಾಗದೆ ತಲೆ ಬಾಗಿಸಿದೆ. ಚಳಿಯಲ್ಲೂ ಮೈ ಬೆವರಲಾರಂಭಿಸಿತು.
"ನಿತಿನ್... ನಿನ್ನನ್ನು ಈ ರೀತಿ ನೋಡಲಾಗುತ್ತಿಲ್ಲ. ನನ್ನನ್ನು ಕೇವಲ ಗೆಳತಿಯಾಗಲ್ಲದೆ ನಿನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆನ್ನುವ ವಾಂಛೆ ನಿನ್ನಲ್ಲಿ ಹುಟ್ಟಿದ್ದಾದರೂ ಹೇಗೆ? ನಮ್ಮಿಬ್ಬರ ಒಡನಾಟ, ಸ್ನೇಹವನ್ನು ನೋಡಿದವರು ಏನೆಲ್ಲಾ ಅನ್ನುತ್ತಿದ್ದರು ಎಂದು ನಿನಗೂ ಗೊತ್ತು. ಆದರೆ ನಾನು ಅವ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಯಾಕೆ ಗೊತ್ತಾ? ನನಗೆ ನಮ್ಮ ಸ್ನೇಹದ ಮೇಲೆ ನಂಬಿಕೆ ಇತ್ತು. ಆದರೆ ನಿನ್ನ ಮನಸ್ಸಲ್ಲಿ ಇಂತಹ ಭಾವನೆ ಇದೆ ಎಂಬುದು ನನಗೆ ತಿಳಿದಿರಲಿಲ್ಲ." ಸಾಕ್ಷಿ ಅದು ಹಾಗಲ್ಲ ಎಂದು ಹೇಳಬೇಕೆಂದುಕೊಂಡೆ. ಪದ ಹುಟ್ಟಲೇ ಇಲ್ಲಾ.
ಕಾಲುಗಳು ಕಸುವು ಕಳೆದುಕೊಳ್ಳಲಾರಂಭಿಸಿದವು. ನಿಂತಲ್ಲೇ ಸಣ್ಣಗೆ ನಡುಗಲಾರಂಭಿಸಿದೆ. ಇದ್ದಬದ್ದ ಶಕ್ತಿ, ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ನಿಧಾನಕ್ಕೆ ತಲೆಯೆತ್ತಿದೆ. ಎದುರಿಗೆ ಸಾಕ್ಷಿ... ಆಕೆಯ ಮೊಗದಲ್ಲಿದ್ದ ಬೇಸರದ ಛಾಯೆ... ನನ್ನ ಬಗ್ಗೆಯೇ ನನಗೆ ರೇಜಿಗೆ ಹುಟ್ಟಿತು. ಆಕೆಯ ಬದುಕಿನ ಸಂತಸದ ಮುನ್ನುಡಿಯಾಗಬೇಕೆಂದಿದ್ದ ನಾನು ಆಕೆಯ ಜೀವನದ ಕಹಿನೆನಪಿನ ಪುಟಗಳಲ್ಲಿ ಸೇರಿಹೋದೆನೆ? ನಿಂತಲ್ಲೇ ಕುಸಿದು ಹೋದೆ.
"ನಿತಿನ್... ಆರ್ ಯೂ ಆಲ್‌ರೈಟ್... ಏನಾಯ್ತೋ..?"
***
ಸಂಜೆಯ ವಾತಾವರಣ ಕೆಂಪೇರಿತ್ತು. ಕುಸಿದಿದ್ದ ನನ್ನನ್ನು ಸಾಕ್ಷಿ ಆಧರಿಸಿದ್ದಳು. ಅವಳ ಕಣ್ಣುಗಳಲ್ಲಿದ್ದ ಗಾಬರಿ ಆಕೆಯ ನೋಟದ ತೀಕ್ಷ್ಣತೆಯನ್ನು ಕಡಿಮೆ ಮಾಡಿತ್ತು. ಆಶ್ಚರ್ಯ! ಅವಳ ತೋಳಿನ ಆಸರೆಯಲ್ಲಿದ್ದರೂ ಆ ಸ್ಪಶ ನನ್ನ ಯಾವ ವಿಕಾರಗಳನ್ನೂ ಕೆರಳಲಿಸಲಿಲ್ಲ! ಹಾಗಾದರೆ ಒಂದು ವಾರದ ಹಿಂದಷ್ಟೇ ಸಾಕ್ಷಿಯ ಕುರಿತಾಗಿ ಉದಿಸಿದ್ದ ನನ್ನ ವಾಂಛೆಗಳೆಲ್ಲಾ ಸತ್ತುಹೋದವೆ? "ನನ್ನನ್ನು ಕ್ಷಮಿಸು" ಎಂದು ಕೇಳಬೇಕೆಂದುಕೊಂಡು ಬಾಯಿ ತೆರೆದೆ. ಏನೂ ಮಾತನಾಡಬೇಡ ಎಂಬಂತೆ ಸಾಕ್ಷಿ ಸಂಜ್ಞೆ ಮಾಡಿದಳು. ಪ್ರಾಯಶಃ ನನ್ನ ತಳಮಳಗಳು ಅವಳಿಗೆ ಅರ್ಥವಾಗಿರಬೇಕು.
"ನಿನ್ನನ್ನು ಹರ್ಟ್ ಮಾಡಬೇಕು ಎಂಬ ಉದ್ಧೇಶ ನನಗಿರಲಿಲ್ಲ. Sorry ಕಣೋ. ನೀನೂ ಎಲ್ಲಾ ಹುಡುಗರ ಥರ ಸ್ನೇಹಕ್ಕೆ ಪ್ರೀತಿಯ ಹಣೆಪಟ್ಟಿ ಹಚ್ಚಲು ಹೊರಟದ್ದು ಕಂಡು ಸ್ವಲ್ಪ ಬೇಜಾರಾಯ್ತು. ನನ್ನ ಮಾತುಗಳಿಂದ ನಿನಗೆ ನೋವಾಗಿದ್ದರೆ Sorry." ಎಂದ ಸಾಕ್ಷಿಯ ಮೊಗದಲ್ಲಿ ಕಂಡಿದ್ದು ಮತ್ತದೇ ಭರವಸೆಯ ಬೆಳಕು.
"ನೀನ್ಯಾಕೆ... Sorry ಕೇಳ್ತಿಯಾ. ಇಷ್ಟೆಲ್ಲಾ ಆದದ್ದು ನನ್ನಿಂದಾಗಿ. ನನ್ನ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ" ಎಂದೆ. ಈ ಬಾರಿ ನನ್ನ ಮಾತು ಕೊರಳಲ್ಲಿ ಧ್ವನಿ ಪಡೆದು, ನಾಲಗೆಯ ಮೇಲಿಂದ ಜಾರಿ, ತುಟಿಯನ್ನು ದಾಟಿ ಸಾಕ್ಷಿಯ ಕಿವಿಯನ್ನು ತಲುಪಿತು.
"ಸಾಕು. ಇನ್ನೇನೂ ಹೇಳಬೇಡ. ಇದೆಲ್ಲಾ ಆಗಿದ್ದು ನಿನ್ನಿಂದಾಗಿ ಅಲ್ಲ, ಅರೆಕ್ಷಣದ ವಾಂಛೆಯಿಂದ ಅನ್ನುವುದು ನನಗೆ ಗೊತ್ತು. ನಡೆದಿದ್ದಕ್ಕೆಲ್ಲಾ ಕಾರಣಗಳು, ವಿವರಣೆಗಳು ನನಗೆ ಬೇಕಾಗಿಲ್ಲ. ಅದೆಲ್ಲಾ ಮರೆತುಬಿಡು. ನನಗೆ ನನ್ನ ಹಳೆಯ ನಿತಿನ್ ಪುನಃ ಸಿಕ್ಕಿದ. ಅಷ್ಟು ಸಾಕು." ಎಂದು ತುಂಟ ನಗೆ ನಕ್ಕಳು. ನನ್ನ ದೇಹಕ್ಕೆ ಕಳೆದು ಹೋದ ಚೈತನ್ಯ ಮತ್ತೆ ಸಿಕ್ಕಿತು. ಸೂರ್ಯ ಪೂರ್ಣವಾಗಿ ಮುಳುಗಲು ಸಿದ್ಧನಾದ.
"ಸರಿ... ಕತ್ತಲಾಗುತ್ತಾ ಬಂತು. ಮನೆಯಲ್ಲಿ ಅಮ್ಮ ಕಾಯ್ತಿರ್ತಾರೆ. ನೀನು ಹೊರಡು" ಎಂದೆ.
"ಯಾವಾಗ್ಲೂ ಮನೆಯವರೆಗೂ ಬಿಡ್ತಾ ಇದ್ಯಲ್ಲಾ. ಇವತ್ತೇನಾಯ್ತು?" ಎಂದ ಸಾಕ್ಷಿಯ ಮಾತಿನಲ್ಲಿ ಮತ್ತೆದೇ ಮುಗ್ಧತೆಯಿತ್ತು.
"ಇನ್ನು ಸ್ವಲ್ಪ ಹೊತ್ತು ಇದ್ದು ಬರ್ತೀನಿ. ಚಳಿ ಜಾಸ್ತಿಯಾಗ್ತಾ ಇದೆ. ನೀನು ಹೊರಡು" ಎಂದರೂ ಆಕೆಯ ಮೊಗದಲ್ಲಿದ್ದ ಪುಟ್ಟ ಮಗುವಿನ ಹಠ ನಾನು ಬರದೆ ಆಕೆ ಹೊರಡುವುದಿಲ್ಲವೆಂಬುದನ್ನು ಸಾರಿ ಹೇಳಿತು.
"ಸರಿ. ಸ್ವಲ್ಪ ಹೊತ್ತು ಒಂಟಿಯಾಗಿರಬೇಕೆಂದರೆ ಇಲ್ಲೇ ಇರು. ನಾನು ಅತ್ತ ಕಡೆ ಕಾಯುತ್ತಿರುತ್ತೇನೆ" ಎಂದ ಸಾಕ್ಷಿ ಮೃದುವಾಗಿ ನನ್ನ ತಲೆ ನೇವರಿಸಿ ಏನೂ ಆಗಿಲ್ಲವೆಂಬಂತೆ ಅತ್ತ ಕಡೆ ಹೆಜ್ಜೆ ಹಾಕಲಾರಂಭಿದಳು.
ಸ್ವಲ್ಪ ಹೊತ್ತು ಆಕೆ ನಡೆದು ಹೋದ ಹಾದಿಯನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಈಗ ಮನಸ್ಸಲ್ಲಿ ಯಾವ ಗೊಂದಲಗಳೂ ಇರಲಿಲ್ಲ. ಶೂನ್ಯ ಭಾವ. ಸ್ವಲ್ಪ ಹೊತ್ತು ನಿಧಾನವಾಗಿ ನಡೆದು ಹೋಗುತ್ತಿದ್ದ ಸಾಕ್ಷಿಯನ್ನು ನೋಡುತ್ತಾ ನಿಂತೆ. ಒಂದೊಂದಾಗಿ ದಡಕ್ಕಪ್ಪಳಿಸುತ್ತಿದ್ದ ಅಲೆಗಳು ಒದ್ದೆ ಮರಳಿನಲ್ಲಿ ಆಕೆ ಮೂಡಿಸಿದ್ದ ಹೆಜ್ಜೆ ಗುರುತುಗಳನ್ನು ಅಳಿಸಿ ಹಿಂದೆ ಹೊಗುತ್ತಿದ್ದವು. ಮುಂದಿನ ದಾರಿ ಸ್ಪಷ್ಟವಾಯಿತು.
"ಸಾಕ್ಷಿ... ನಡಿ ಮನೆಗೆ ಹೋಗೋಣ" ಎಂದು ಜೋರಾಗಿ ಕೂಗಿ ಆಕೆಯತ್ತ ಹೆಜ್ಜೆ ಹಾಕಲಾರಂಭಿಸದೆ.