ಬದುಕು ಎಲ್ಲವನ್ನೂ ಕಲಿಸುತ್ತದೆ. ಅನಿವಾರ್ಯತೆ ಎದುರಾದಾಗ ಎಂತಹ ಭಾವನೆಗಳೂ ಬಾಲಿಶವಾಗುತ್ತದೆ ಎಂದು ಅಪ್ಪ ಹೇಳುತ್ತಿದ್ದ ಮಾತು ಮನದಲ್ಲೊಮ್ಮೆ ಮಿಂಚಿ ಮರೆಯಾಯ್ತು. ಆದರೆ ನನ್ನ ಬದುಕೇ ಆ ಮಾತಿಗೆ ನಿದರ್ಶನವಾದೀತು ಎಂಬ ಕಲ್ಪನೆಯೂ ನನಗಿರಲಿಲ್ಲ. ಕಾಲೇಜು ಮೆಟ್ಟಿಲೇರಿದ್ದರೂ ಅಮ್ಮನ ಬೆಚ್ಚಗಿನ ಆರೈಕೆಯಲ್ಲಿಯೇ ಭದ್ರವಾಗಿ ಬಚ್ಚಿಟ್ಟು ಕೊಂಡಿದ್ದ ನಾನು ಉದ್ಯೋಗ ನಿಮಿತ್ತ ಅಪ್ಪ-ಅಮ್ಮ, ಮನೆ, ಸಂಬಂಧಗಳ ಸೂಕ್ಷ್ಮ ಸುಳಿಗಳನ್ನು ಬಿಟ್ಟು ಸಾವಿರಾರು ಮೈಲು ದೂರದ ಊರಿಗೆ ಬಂದು ನೆಲೆಸಿದ್ದು ವಿಧಿಯ ಆಟವೇ? ಅಥವಾ ಬದುಕಿನ ವಿವಿಧ ಮಜಲಿನ ಒಂದು ಹಂತವೇ? ಎಂಬ ಧ್ವಂದ್ವ ನನ್ನನ್ನಿಂದಿಗೂ ಕಾಡುತ್ತಿದೆ. ತಲೆ ಧಿಮ್ಮೆನ್ನುವಂತೆ ಮಾಡುತ್ತಿದ್ದ ಈ ಎಲ್ಲಾ ಯೋಚನೆಗಳ ನಡುವೆಯೂ, ಆರು ತಿಂಗಳ ಬಳಿಕ ಮತ್ತೆ ಹುಟ್ಟಿದ ಮಣ್ಣಿಗೆ ಮರಳಿ, ತಾಯ ಮಡಿಲಲ್ಲಿ ತಲೆಯಿಟ್ಟು, ಇಷ್ಟು ಕಾಲ ಮನದೊಳಗೇ ಹುದುಗಿಸಿಟ್ಟಿದ್ದ ಬೇಗುದಿ, ಬೇಸರಗಳನ್ನೆಲ್ಲಾ ಮರೆಯುವ ತವಕ ಮಾತ್ರ ಕಿಂಚಿತ್ತೂ ಕಡಮೆಯಾಗಿರಲಿಲ್ಲ. ಆ ಅವರ್ಣನೀಯ ಸಂಭ್ರಮದ ಕ್ಷಣದ ಮುಂದೆ ಈ ಆಯಾಸವೆಲ್ಲವೂ ಗೌಣವಾಗಿ ಕಂಡಿತ್ತು. ಮತ್ತೆ ಹಳೆಯ ದಿನಗಳು ಮರಳಬಾರದೇ ಎನ್ನುವ ತವಕದೊಂದಿಗೆ, ಬಾರದ ನಿದ್ದೆಯನ್ನು ತಂದುಕೊಳ್ಳುವ ಪ್ರಯತ್ನ ಮಾಡುತ್ತಾ ನಿಧಾನವಾಗಿ ಕಣ್ಣುಗಳನ್ನು ಮುಚ್ಚಿಕೊಂಡೆ. ರೈಲಿನ ಕುಲುಕಾಟ, ಹಿತವಾಗಿ ಬೀಸುತ್ತಿದ್ದ ಗಾಳಿ ಇವೆಲ್ಲವೂ ತೊಟ್ಟಿಲಿನೊಳಗೆ ಬೆಚ್ಚಗೆ ಮಲಗಿದ ಕಂದನ ಸುಖವನ್ನು ನೆನಪಿಸುತ್ತಿತ್ತು... ಕಣ್ಣಾಲಿಗಳಲ್ಲಿ ನಿದ್ದೆಯ ಜೊಂಪು ಮೆತ್ತಗೆ ಆವರಿಸತೊಡಗಿತು...
***
ಪಿಸುಮಾತು, ಮೆಲುವಾದ ಬಿಕ್ಕಳಿಕೆ, ಸಾಂತ್ವನದ ನುಡಿಗಳು... ಅರೆರೆ ಇದೇನಿದು ಅಂದುಕೊಳ್ಳುವಷ್ಟರಲ್ಲಿ ನಿದ್ರಾದೇವಿಯ ಗಾಢ ಆಲಿಂಗನದಿಂದ ಒಮ್ಮೆಲೆ ಹೊರ ಜಾರಿದ ಅನುಭವ. ವಾಸ್ತವ ಅರಿವಿಗೆ ಬಂದು ಕಣ್ತೆರೆದು ನೋಡಿದರೆ ಸುತ್ತಲೂ ಕತ್ತಲು. ರಾತ್ರಿಯ ಮೌನವನ್ನು ಮುರಿದು ಮುನ್ನುಗುತ್ತಿದ್ದ ರೈಲಿನ ಸದ್ದು. ಅಲ್ಲೊಮ್ಮೆ ಇಲ್ಲೊಮ್ಮೆ ಮಿಣುಕಾಡುತ್ತಿದ್ದ ಬೆಳಕು ಬಿಟ್ಟರೆ ಬೇರೆ ಯಾವುದೂ ಅರಿವಿಗೆ ಬರಲಿಲ್ಲ. ಆದರೆ ಈ ಮಧ್ಯೆಯೂ ನನಗೆ ಆ ಬಿಕ್ಕಳಿಕೆ ಕೇಳಿಸಿದ್ದು ನಿಜ. ಅದು ಖಂಡಿತಾ ಕನಸಲ್ಲ ಎಂದು ಮನಸ್ಸು ಒತ್ತಿ ಹೇಳುತ್ತಿತ್ತು.ನಿಧಾನವಾಗಿ ಬೋಗಿಯೊಳಗೆ ಹರಡಿದ್ದ ಮಂದ ಬೆಳಕಿಗೆ ಕಣ್ಣು ಹೊಂದಿಕೊಳ್ಳಲಾರಂಭಿಸಿತು. ನನ್ನ ಎಡಗಡೆಗಿದ್ದ ಬರ್ತ್‌ನಿಂದ ಆ ಬಿಕ್ಕಳಿಕೆ ಕೇಳಿಬರುತ್ತಿತ್ತು. ಅದು ಮುಂಜಾನೆ ನನ್ನೊಂದಿಗೆ ರೈಲನ್ನೇರಿದ್ದ ಯುವತಿಯದ್ದು ಎಂಬುದು ಅರಿವಾಗಲು ನನಗೆ ಹೆಚ್ಚು ಸಮಯ ತಗುಲಲಿಲ್ಲ. ಆಕೆಯನ್ನು ಸಂತೈಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ ಆಕೆಯ ಸಂಗಾತಿ ನಿರಾಶನಾಗಿ ಕುಳಿತಿದ್ದ.
ಮುಂಜಾನೆ ರೈಲನ್ನೇರಿದಾಗಿನಿಂದಲೂ ಆ ಜೋಡಿ ಎಲ್ಲರ ಗಮನ ಸೆಳೆದಿತ್ತು. ಆಕೆಗೆ ಸುಮಾರು 18ರ ವಯಸ್ಸಿರಬಹುದು. ತಕ್ಕ ಮಟ್ಟಿಗೆ ಚೆಲುವೆಯೆಂದೇ ಹೇಳಬಹುದು. ಇನ್ನು, ಗಟ್ಟಿಮುಟ್ಟಾಗಿದ್ದ ಆಕೆಯ ಜೊತೆಗಾರನದು 25ರ ಆಸುಪಾಸು. ಬೆಳಗ್ಗಿನಿಂದ ಬೋಗಿಯೋಳಗೆ ಸ್ವಚ್ಛಂದ ಹಕ್ಕಿಯಂತೆ ಹಾರಾಡುತ್ತಿದ್ದ ಆ ಜೋಡಿಯನ್ನು ನೋಡಿದರೆ ಅವರಿಬ್ಬರಿಗೂ ಆಗಷ್ಟೇ ಮದುವೆಯಾದಂತಿತ್ತು. ಆದರೆ ಆಕೆಯ ಕತ್ತಿನಲ್ಲಿ ತಾಳಿಯಾಗಲೀ ಬೆರಳಲ್ಲಿ ಕಾಲುಂಗುರವಾಗಲೀ ಗೋಚರಿಸಿರಲಿಲ್ಲ...
ಇಡೀ ಜಗತ್ತೇ ತಮ್ಮದೆಂಬಂತೆ ಮೆರೆಯುತ್ತಿದ್ದ ಅವರಿಬ್ಬರೂ ಈಗ ಈ ರೀತಿ ವಿಷಾದದಲ್ಲಿ ಮುಳುಗಿರುವುದನ್ನು ನೋಡಿದರೆ ಏನೋ ತೊಂದರೆಯಾಗಿರುವುದಂತೂ ನಿಜ ಎಂಬ ಅನುಮಾನ ನನ್ನನ್ನು ಕಾಡದಿರಲಿಲ್ಲ. ಜೊತೆಗೆ ಆಕೆಯ ಅಳುವಿಗೆ ಕಾರಣ ತಿಳಿದುಕೊಳ್ಳಲೇ ಬೇಕೆಂಬ ಕೆಟ್ಟ ಕುತೂಹಲವೂ ಸೇರಿಕೊಂಡಿತು. ಅಲ್ಲಿಗೆ ನನ್ನ ನಿದ್ದೆಗೆ ತಿಲಾಂಜಲಿ ನೀಡಿ ಮಲಗಿದಲ್ಲಿಂದಲೇ ಮೆತ್ತಗೆ ಹೊರಳಿ ಅವರಿಬ್ಬರನ್ನು ಗಮನಿಸತೊಡಗಿದೆ. ಆಕೆಯ ಬಿಕ್ಕಳಿಕೆ ಮತ್ತದಕ್ಕೆ ಸಂಗಾತಿಯ ಸಾಂತ್ವನ ಮುಂದುವರಿದಿತ್ತು. ಅಳುವಿನ ನಡುವೆಯೇ ಸಾಗಿದ್ದ ಮಾತುಗಳಿಂದಾಗಿ ಇನ್ನೂ ಕಾಲೇಜು ಕಲಿಯುತ್ತಿದ್ದ ಆಕೆ, ಆ ಯುವಕನ ಪ್ರೇಮಪಾಶದಲ್ಲಿ ಸಿಲುಕಿ, ಮನೆಯವರ ವಿರೋಧದ ಕಾರಣದಿಂದಾಗಿ ತನ್ನ ಹೆತ್ತವರನ್ನೂ, ಮನೆಯನ್ನೂ ತೊರೆದು ತನ್ನ ಪ್ರಿಯತಮನೊಡನೆ ಬಂದಿರುವುದು ಖಾತ್ರಿಯಾಯಿತು. ಆದರೆ ಈಗ ಇತ್ತ ಪ್ರೀತಿಸಿದವನನ್ನು ಬಿಡಲಾರದೆ ಅತ್ತ ಹೆತ್ತವರ ಬಂಧವನ್ನೂ ತೊರೆಯಲಾರದೆ ತೊಳಲಾಡುತ್ತಿದ್ದಳು ಆ ಹುಡುಗಿ. ಪ್ರಾಯಶಃ ಅವರಿಬ್ಬರೂ ನನ್ನನ್ನು ಗಮನಿಸದಂತಿರಲಿಲ್ಲ. ಅದೂ ಸರಿ. ಪ್ರೀತಿಗಾಗಿ ಇಡೀ ಜಗತ್ತನ್ನೇ ಧಿಕ್ಕರಿಸಿ ಹೊರಟವರಿಗೆ ನಾನ್ಯಾವ ಲೆಕ್ಕ. ಮತ್ತಷ್ಟು ಕುತೂಹಲದಿಂದ ಆಕೆಯನ್ನು ಗಮನಿಸತೊಡಗಿದೆ, ನಸುಗತ್ತಲಲ್ಲೂ ಕಣ್ಣೀರು ತುಂಬಿ ಹೊಳೆಯುತ್ತಿದ್ದ ಆ ಕಣ್ಣುಗಳಲ್ಲಿ ಆಗಷ್ಟೇ ಉನ್ಮತ್ತ ಪ್ರೀತಿಯ ಅಮಲು ಇಳಿದು ಹೋದ ಲಕ್ಷಣವಿತ್ತು. ಹೆಚ್ಚು ಕಡಿಮೆ ಆ ಯುವಕನದ್ದೂ ಅದೇ ಕಥೆ.
ಈಗ ಅವರಿಬ್ಬರ ಮೊಗದಲ್ಲಿರುವುದು ಪ್ರೀತಿ ತಂದಿತ್ತ ನೋವಿನ ನೆರಳೇ ಅಥವಾ ವಿಷಾದವೇ?... ಉಹ್ಞೂಂ... ಅದು ನನಗೂ ಸ್ಪಷ್ಟವಾಗಲಿಲ್ಲ. ಪ್ರಾಯಶಃ ಅವರಿಬ್ಬರಲ್ಲೂ ಮಾತುಗಳು ಮುಗಿದಿದ್ದವು. ರಾತ್ರಿಯ ನೀರವ ಮೌನವನ್ನು ಭೇದಿಸಿ ತನ್ನ ಗಮ್ಯದತ್ತ ಮುನ್ನಡೆಯುತ್ತಿದ್ದ ರೈಲಿನ ಸದ್ದು ಅವರಿಬ್ಬರ ಮೌನ ರೋದನವನ್ನು ಮೀರಿ ಮಾರ್ದನಿಸುತ್ತಿತ್ತು. ಅಬ್ಬಾ! ಕೆಲವೇ ದಿನಗಳ ಹಿಂದೆ ಪ್ರೀತಿಯ ಮಾತಿಗಾಗಿ, ಪರಸ್ಪರ ಸಾನಿಧ್ಯಕ್ಕಾಗಿ ಹಂಬಲಿಸುತ್ತಿದ್ದಿರಬಹುದಾದ ಆ ಜೋಡಿ ಇಂದು ತಮ್ಮಲ್ಲಿ ಹಂಚಿಕೊಳ್ಳಲು ಏನೂ ಉಳಿದಿಲ್ಲವೇನೋ ಎಂಬಂತೆ ಕುಳಿತುಕೊಂಡಿದ್ದು ನೋಡಿ 'ಪ್ರೀತಿ' ಎಂದರೆ ಇಷ್ಟೇನಾ ಎಂಬ ಸಂದೇಹ ನನ್ನನ್ನು ಕಾಡತೊಡಗಿತು... ಬಹಳ ಹೊತ್ತಾದರೂ ಅವರಿಬ್ಬರು ಮತ್ತೆ ಮಾತನಾಡುವ ಪ್ರಯತ್ನ ಮಾಡಲಿಲ್ಲ. ಪ್ರಾಯಶಃ ನನ್ನನ್ನು ಕಾಡುತ್ತಿರುವ 'ಪ್ರಶ್ನೆ'ಯೇ ಅವರನ್ನೂ ಆವರಿಸಿರುವಂತೆ ಕಂಡುಬಂತು. ಅವರನ್ನು ಅವರ ಪಾಡಿಗೆ ಬಿಟ್ಟು ನಾನು ನಿಧಾನವಾಗಿ ಮಗ್ಗುಲು ಬದಲಾಯಿಸಿ ನಿದ್ರಿಸುವ ಪ್ರಯತ್ನ ಮಾಡಿದೆ. ಆದರೆ ಗೊಂದಲವೇ ತುಂಬಿದ್ದ ಕಣ್ಣಿಗೆ ನಿದ್ದೆಯ ಸುಖವಾದರೂ ಎಲ್ಲಿಂದ ಬರಬೇಕು...
ಮುಂದೇನು..?
ತಮ್ಮ ಪ್ರೀತಿಯನ್ನು ಮನೆಯವರು ಒಪ್ಪಲಿಲ್ಲ ಎಂದಾಕ್ಷಣ ಮನೆಯಿಂದ, ಹೆತ್ತವರಿಂದ ದೂರಾಗುವ, ಇಲ್ಲವೇ ಆತ್ಮಹತ್ಯೆಯಂತಹ ಪರಮ ಮೂರ್ಖತನದ ಕಾರ್ಯಕ್ಕೆ ಕೈಹಾಕುವ ಇವರಂತಹ 'ಪ್ರೇಮಿ'ಗಳು 'ಮುಂದೇನು?' ಎಂಬ ಪ್ರಶ್ನೆಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದರೆ ಪ್ರಾಯಶಃ ಈ ರೀತಿ ಕಣ್ಣೀರು ಹಾಕಬೇಕಾದ ಪ್ರಸಂಗ ಬರುತ್ತಿರಲಿಲ್ಲವೇನೋ? ಎಂಬ ಅನಿಸಿಕೆ ಮಿಂಚಿ ಮರೆಯಾಯ್ತು. ಯೌವನದ ಹುಚ್ಚು ಆವೇಶಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಲ್ಲ. ಆದರೆ ಆ ಆವೇಗ ಕಡಿಮೆಯಾದ ಮೇಲಷ್ಟೇ ತಾರುಣ್ಯದ ಆಕಾಂಕ್ಷೆಯಿಂದ ಉದ್ಭವವಾಗುವ ಒಂದು ಕ್ಷಣದ 'ಹುಚ್ಚು ಪ್ರೀತಿ'ಗಾಗಿ ತಾವು ಕಳೆದುಕೊಂಡಿರುವ ನಿಜವಾದ 'ಪ್ರೀತಿ'ಯ ಅರಿವಾಗುವುದು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ... ಮತ್ತೆ ಮನೆ, ಅಮ್ಮ, ಪಪ್ಪ, ಊರಿನ ನೆನಪು ತೀವ್ರವಾಗಿ ಕಾಡಲಾರಂಭಿಸಿತು. ಹೆತ್ತವರ ವಾತ್ಸಲ್ಯದ ಅನುಭೂತಿ ನೆನೆಸಿಕೊಂಡಾಕ್ಷಣ ಮನ ರೋಮಾಂಚನ ಗೊಂಡಿತು. ಈ ಮಧ್ಯೆ ಬಳಲಿದ್ದ ದೇಹವನ್ನು ನಿದ್ರಾದೇವಿ ಅದೆಷ್ಟು ಹೊತ್ತಿಗೆ ತನ್ನ ಮಡಿಲಿಗೆಳೆದುಕೊಂಡಳೋ ಅರಿವಾಗಲೇ ಇಲ್ಲ.
***
'ಚಾಯ್, ಬೋಲಿಯೇ... ಚಾಯ್... ಚಾಯ್...' ಎಂಬ ಗದ್ದಲ ಮತ್ತೊಮ್ಮೆ ಗಾಢ ನಿದ್ದೆಯಿಂದ ನನ್ನನ್ನು ಬಡಿದೆಬ್ಬಿಸಿತು. ಕಣ್ಣುಜ್ಜಿಕೊಂಡು ವಾಚ್ ನೋಡಿಕೊಂಡರೆ 8 ಗಂಟೆ ಆಗಿತ್ತು. ಅಬ್ಬಾ! ರಾತ್ರಿ ಯೋಚನೆಗಳಲ್ಲೇ ಕಳೆದುಹೋಗಿದ್ದ ನಾನು ತುಂಬಾ ಹೊತ್ತು ಮಲಗಿಬಿಟ್ಟಿದ್ದೆ. ಬರ್ತ್‌ನಿಂದ ಕೆಳಗಿಳಿದು ಇನ್ನೂ ಓಡುತ್ತಲೇ ಇದ್ದ ರೈಲಿನ ಕಿಟಕಿಯಿಂದ ಹೊರಗಿಣುಕಿ ನೋಡಿದೆ.ಸುಳಿಯುತ್ತಿದ್ದ ತಣ್ಣನೆಯ ಗಾಳಿ, ಸಾಲು ಸಾಲು ತೆಂಗು, ಮಣ್ಣಿನ ಕಂಪು ಇನ್ನು ಸ್ವಲ್ಪವೇ ಸಮಯದಲ್ಲಿ ನಾನು ನಮ್ಮೂರಲ್ಲಿರುತ್ತೇನೆ ಎಂಬುದನ್ನು ಸಾರಿ ಹೇಳುತ್ತಿತ್ತು. ಮನೆ ಸೇರುತ್ತೇನೆಂಬ ಸಂತಸ, ಅಮ್ಮನ ಮಡಿಲು ಸೇರುವ ಆಹ್ಲಾದ ಇವೆಲ್ಲ ಭಾವಗಳು ಸೇರಿಕೊಂಡು ಖುಷಿಯಿಂದ ಕುಣಿಯಬೇಕೆಂದುಕೊಂಡರೂ ಆ ಬೋಗಿಯಲ್ಲಿ ಇನ್ನೂ ಕೆಲವು ಸಹಪ್ರಯಾಣಿಕರಿದ್ದುದರಿಂದ ಆ ಆಸೆಯನ್ನು ಅಲ್ಲೇ ಹತ್ತಿಕ್ಕಿಕೊಂಡೆ. ಈ ನಡುವೆ ರಾತ್ರಿಯ ಘಟನೆಗಳು ಮತ್ತೆ ನೆನಪಾದವು...
ಅರೆ! ಆ ಜೋಡಿ ಎಲ್ಲಿ? ಅವರಿದ್ದ ಬರ್ತ್ ಖಾಲಿಯಾಗಿತ್ತು. ಪ್ರಾಯಶಃ ನಾನು ನಿದ್ದೆಯಲ್ಲಿದ್ದಾಗ, ಅವರಿಬ್ಬರು ಇಳಿದು ಹೋಗಿರಬೇಕು... ಅಥವಾ ಇನ್ನೇನಾದರೂ...!?
ಛೇ! ಛೇ! ಆ ರೀತಿ ಕೆಟ್ಟದ್ದೇನೂ ಆಗಿರಲಿಕ್ಕಿಲ್ಲ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಕೂ... ಎಂಬ ಸದ್ದಿನೊಂದಿಗೆ ರೈಲು ಇದ್ದಕ್ಕಿದ್ದಂತೆ ತನ್ನ ವೇಗ ತಗ್ಗಿಸಿಕೊಂಡಿತು. ನಾನು ಇಳಿಯಬೇಕಾದ ನಿಲ್ದಾಣ ಬಂತು. ಅಲ್ಲಿಂದ ಮನೆ ತಲುಪಲು ಮತ್ತೆ ಬಸ್ಸು ಹಿಡಿಯಬೇಕಾಗಿದ್ದರಿಂದ ಆತುರಾತುರವಾಗಿ ಲಗೇಜುಗಳನ್ನು ಸರಿಪಡಿಸಿಕೊಂಡು ಇಳಿಯಲು ಸಿದ್ಧನಾದೆ. ಪರಿಚಿತ ನೆಲ, ಭಾಷೆಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮನದಲ್ಲಿದ್ದ ಎಲ್ಲಾ ಗೊಂದಲಗಳೂ ಕಳೆದುಹೋದವು. ಇರುಳು ಉದ್ಭವಿಸಿದ್ದ ಪ್ರಶ್ನೆ ಮರೆತು ಹೋಯ್ತು... ಆ ಪ್ರೇಮಿಗಳು ಏನಾದರು ಎಂಬ ಕುತೂಹಲ ಕೂಡಾ ಸತ್ತುಹೊಯ್ತು. ಅಂತಿಮವಾಗಿ ಅಲ್ಲಿ ಉಳಿದದ್ದು ಮನೆ ಸೇರುವ ತವಕ ಮಾತ್ರ. ಎಲ್ಲವನ್ನೂ ಮರೆತು ತನ್ನ ಗಮ್ಯದತ್ತ ಮುನ್ನುಗ್ಗುವ ರೈಲಿನಂತೆ ನಾನೂ ಹತ್ತಿರದಲ್ಲಿದ್ದ ಬಸ್ಸು ನಿಲ್ದಾಣದತ್ತ ಹೆಜ್ಜೆ ಹಾಕಿದೆ.