Friday 30 December 2011

ಬದಲಾವಣೆ ಜಗದ ನಿಯಮ...

ಬೆಳಗ್ಗೆ ಎಷ್ಟೇ ಬೇಗ ಎದ್ದರೂ 8 ಮುಂಚೆ ಮನೆ ಬಿಡುವ ಪ್ರಶ್ನೆಯೇ ಇಲ್ಲ... ಹಾಗೂ-ಹೀಗೂ ಸಮಯಕ್ಕೆ ಸರಿಯಾಗಿ ಬಸ್‌ಸ್ಟ್ಯಾಂಡ್‌ಗೆ ಹೋದ್ರೆ ಅಲ್ಲಿ ಬಸ್ಸುಗಳೇ ಇರೋದಿಲ್ಲ... ಅಪ್ಪಿ-ತಪ್ಪಿ ಕಾಲೇಜ್‌ಗೆ ಬೇಗನೇ ತಲುಪಿದ್ರೆ ಅವತ್ತು ಫಸ್ಟ್ ಅವರ್ ಇರ‍್ತಾನೇ ಇರ್ಲಿಲ್ಲ... ಇದು ಸುಮಾರು ನಾಲ್ಕು ವರ್ಷಗಳ ಹಿಂದಿನ ಮಾತು. ಫೈನಲ್ ಬಿ.ಎ ಕಲಿಯುತ್ತಿದ್ದ ದಿನಗಳವು. ಎಲ್ಲಾ ಕಾರಣಗಳಿಗೂ ಧರ್ಮಸ್ಥಳದ ರಾಜಧಾನಿ ಎನಿಸಿದ್ದ ಉಜಿರೆಗೆ ನಾವೆಲ್ಲಾ ತಲುಪುತ್ತಿದ್ದುದೇ ಹೀಗೆ...

ನಂತರ ಉದ್ಯೋಗಕ್ಕಾಗಿ ಊರಿನಿಂದ ಹೊರಹೋದರೂ ಕೆಲವೇ ವರ್ಷಗಳಲ್ಲಿ ಮತ್ತೆ ಮರಳುವ ಅವಕಾಶ ಸಿಕ್ಕಾಗ ಬೇಡ ಎನ್ನುವ ಮಾತೂ ಮನದಲ್ಲಿ ಸುಳಿಯಲಿಲ್ಲ. ಬಡಗಿನ ಬೆಡಗಿಗೆ ಗುಡ್‌ಬೈ ಹೇಳಿ ಮತ್ತೆ ಊರಿಗೆ ಮರಳಿದ್ದಾಯ್ತು. ಕಾರ್ಯನಿಮಿತ್ತ ಉಜಿರೆಗೆ ಸಾಗಲು ಹಿಂದಿನಂತೆ ಬಸ್‌ಸ್ಟ್ಯಾಂಡ್‌ಗೆ ತಲುಪಿದ್ದೂ ಆಯ್ತು... ಮಾಮೂಲಿನಂತೆ ಲೇಟ್ ಆಗಿತ್ತು. ಆದ್ರೆ ಉಜಿರೆಯತ್ತ ಸಾಗಲು ಬೇಕಾದಷ್ಟು ಬಸ್ಸುಗಳಿದ್ದವು..!
***
ಧರ್ಮಣ್ಣನ ಅಂಗಡಿ. ನಮ್ಮ ಕಾಲೇಜು ಜೀವನದ ಅವಿಭಾಜ್ಯ ಅಂಗ. ಅಲ್ಲೇ ಪಕ್ಕದಲ್ಲಿದ್ದ ಕಾಯಿನ್‌ಫೋನ್. ಅದೆಷ್ಟೋ ಪಿಸುಮಾತುಗಳಿಗೆ, ನೋವು-ನಲಿವುಗಳಿಗೆ ಕಿವಿಯಾಗಿದ್ದ ಆ ಫೋನ್ ಇವತ್ತಿಗೂ ಅಲ್ಲೇ ಇದೆ. ಆದ್ರೆ ಇಂದಿನವರಿಗೆ ಅದು ಮೊದಲಿನಷ್ಟು ಆಪ್ತವಲ್ಲ. ಯಾಕೆ? ಎಂದು ಕೇಳಿದ್ರೆ ಹುಡುಗರ ಪ್ಯಾಂಟ್ ಜೇಬಲ್ಲಿ, ಹುಡುಗಿಯರ ಪರ್ಸ್‌ಗಳಲ್ಲಿ ತಣ್ಣನೆ ಅಡಗಿ ಕುಳಿತಿದ್ದ ಮೊಬೈಲ್‌ಗಳೂ ಉತ್ತರ ಹೇಳಲಿಲ್ಲ.
***
ಭಟ್ಟರ ಹೊಟೇಲ್ ಬೆಂಚು-ಗೋಡೆಗಳು ಮಾತನಾಡುವಂತಿದ್ದರೆ ಕನ್ನಡ ಸಿನಿಮಾ ನಿರ್ದೇಶಕರಿಗೆ ರಿಮೇಕ್ ಮಾಡೋ ಪ್ರಮೇಯವೇ ಬರುತ್ತಿರಲಿಲ್ಲವೇನೋ?! ಎಲ್ಲಾ ಸ್ಪೈಸೀ ಸ್ಟೋರಿಗಳಿಗೆ ಭಟ್ಟರ ಹೊಟೇಲ್ ಮಾಮೂಲು ಅಡ್ಡಾ ಆಗಿತ್ತು. ಇಂದು ಆ ಹೊಟೇಲ್ ಅಲ್ಲೇ ಇದ್ದರೂ ಅಲ್ಲಿನ ಹಾಫ್ ಟೀಗೆ ಹಳೆಯ ಸೊಗಡಿಲ್ಲ. ಮಧ್ಯಾಹ್ನದ ಊಟಕ್ಕೆ ಶೆಟ್ಟರ ಬೇಲ್ ಪುರಿ, ಪಲಾವ್ ತಿನ್ನಬೇಕು ಅನಿಸೋದಿಲ್ಲ. ಸಂಜೆ ದಿಶಾದತ್ತ ಹೆಜ್ಜೆ ಹಾಕೋಕು ಮನಸ್ಸಾಗಲ್ಲ... ಇದ್ಯಾಕೆ ಹೀಗೆ? ಎನ್ನೋದಕ್ಕೆ ಉಜಿರೆಯಲ್ಲಿ ಹೊಸದಾಗಿ ತಲೆಯೆತ್ತಿರುವ ಚಾಟ್ ಸೆಂಟರ್‌ಗಳು, ಕ್ರೀಂ ಪಾರ್ಲರ್‌ಗಳು, ಒಂದಷ್ಟು ಹೊಟೇಲ್‌ಗಳು ಉತ್ತರ ನೀಡಲು ಸಿದ್ಧವಾಗಿದ್ದರೂ ಕಾರಣ ಕೇಳುವ ಮನಸ್ಸಾಗೋದಿಲ್ಲ... ಅದರಲ್ಲೂ ಕೆಲವರ ಪಾಲಿಗೆ ಸ್ವರ್ಗವಾಗಿದ್ದ ಸ್ವಪ್ನಾ ಬದಲಾಗಿದ್ದನ್ನು ನಂಬಲೂ ಸಾಧ್ಯವಾಗಲಿಕ್ಕಿಲ್ಲ!!!
***
ಕಾಲೇಜು... ಬದುಕು ಕಲಿಸಿದ ತಾಣ. ಒಂದಷ್ಟು ನೆನಪುಗಳ ಬುತ್ತಿ. ಪಾಠ ಮಾಡಿದ ಟೀಚರ‍್ಸ್‌ಗಳು, ತರಲೆ ಫ್ರೆಂಡ್ಸ್‌ಗಳು, ಲಾಸ್ಟ್ ಬೆಂಚ್ ಲಾಫ್ಟರ್‌ಗಳು, ಕಾರಿಡಾರ್ ಸರ್ವೇಗಳು, ಕಂಬ ಕಪ್ಪಾಗಿಸಿದ ಮಸ್ತಿಗಳು, ಡೆಸ್ಕ್ ಮೇಲಿನ ಸ್ಕ್ರಿಬ್ಲಿಂಗ್‌ಗಳು, ಸೆನ್ಸಾರ್ ಇಲ್ಲದ ಪತ್ರಿಕೆ ಹೊರತರುವ ರಿಸ್ಕ್‌ಗಳು, ಹಾಗೇ ಸುಮ್ಮನೆ ಸಿಗುವ ನಗುಗಳು, ಸಂಘದ ಪದವಿಗಳು... ಊಫ್..!! ಆದರೆ ಈಗ..?
ಪಾರ್ಕ್‌ನಲ್ಲಿರೋ ಕಲ್ಲುಬೆಂಚುಗಳ ಮಹಿಮೆಯಿಂದಾಗಿ ಕಾರಿಡಾರ್‌ನಲ್ಲಿ ಹರಟೆ ಹೊಡೆಯೋ ಮಂದಿ ಸಿಗೋದಿಲ್ಲ. ಒಂದಷ್ಟು ಡಿಜಿಟಲ್ ಎಸ್.ಎಲ್.ಆರ್ ಕ್ಯಾಮರಾಗಳು, ಲ್ಯಾಪ್‌ಟಾಪ್‌ಗಳು, ವಿಡಿಯೋ ಕ್ಯಾಮರಾಗಳು ಕ್ಯಾಂಪಸ್ ಪ್ರವೇಶಿಸಿರೋದ್ರಿಂದ ವಿದ್ಯಾರ್ಥಿಗಳು ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗಿಲ್ಲ. ಸಮವಸ್ತ್ರ, ಆನ್‌ಲೈನ್ ಎಕ್ಸಾಂ, ಮಲ್ಟಿಮೀಡಿಯಾ ಸ್ಟುಡಿಯೋ, ವಿಡಿಯೋ ಕಾನ್ಫರೆನ್ಸ್ ಇವೆಲ್ಲಾ ಅಪರಿಚಿತ ಪದಗಳಾಗಿ ಉಳಿದಿಲ್ಲ.
***
ಉಜಿರೆ ಪೇಟೆ... ಸೊಂಪಾಗಿದ್ದ ಮರಗಳ ನೆರಳಿನ ಜಾಗದಲ್ಲೀಗ ಕಾಂಕ್ರೀಟ್ ಕಟ್ಟಡಗಳ ಛಾಯೆ. ಉಜಿರೆಯ ಹೆಗ್ಗುರುತಾಗಿದ್ದ ಸರ್ಕಲ್ ಬದಲಾಗಿ ಮಹಾದ್ವಾರ ತಲೆಯೆತ್ತಿ ನಿಂತಿದೆ. ಬಸ್‌ಸ್ಟ್ಯಾಂಡ್ ಸಮಸ್ಯೆ ದೂರಾಗಿದೆ. ಟ್ರಾಫಿಕ್ ಸಮಸ್ಯೆ ಜೋರಾಗಿದೆ. ಪೇಟೆ ಅಕ್ಷರಶಃ ಕಿಷ್ಕಿಂಧೆಯಾಗಿದೆ. ಊರು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಶೈಕ್ಷಣಿಕ-ಸಾಮಾಜಿಕ ರಂಗದಲ್ಲಿ ಹೆಸರು ಗಳಿಸುತ್ತಿದೆ.
ಇದೆಲ್ಲಾ ಗಮನಿಸಿದರೆ ಒಂದಂತೂ ಸ್ಪಷ್ಟ. ಉಜಿರೆ ಹಿಂದಿನಂತಿಲ್ಲ. ಪ್ರಾಯಶಃ ಬದಲಾಗಿದೆ...!

No comments:

Post a Comment