"ನಿಂಗೆ ಹೊಟ್ಟೆ ಉರಿ. ಅದಿಕ್ಕೇ ಇಷ್ಟು ಚೆನ್ನಾಗಿರೋ ಪೋಟೋನ ಚೆನ್ನಾಗಿಲ್ಲ ಅಂತಿದ್ಯಾ. ಎಲ್ರೂ ‘ಸೋ... ಕ್ಯೂಟ್, ಲುಕಿಂಗ್ ಪ್ರೆಟ್ಟಿ’ ಅಂತೆಲ್ಲಾ ಎಫ್.ಬಿ-ಯಲ್ಲಿ ಕಮೆಂಟ್ ಮಾಡಿದ್ದಾರೆ ಗೊತ್ತಾ?... ನೀನೋಬ್ನೇ ಏನೂ ಹೇಳಿಲ್ಲಾ. ಯೂ ಆರ್ ಜೆಲಸ್” ಅಂದು ಬುಸುಗುಡುತ್ತಾ ಅವನ ಕೈಲಿದ್ದ ಕಾದಂಬರಿ ಕಿತ್ತುಕೊಂಡು ಬದಿಗೆಸೆದು, ಸೋಪಾದ ಮೇಲೆ ಅವನಿಗೊರಗಿಕೊಂಡ ಅವಳ ಕಣ್ಣಲ್ಲಿದ್ದುದು ಅವನಿಂದ ಪ್ರಶಂಸೆಯ ಪುಟ್ಟ ಮಾತೊಂದನ್ನು ಕದಿಯುವ ಹಂಬಲ... ಒಂದಷ್ಟು ಹುಸಿಗೋಪ.
![]() |
Image Courtesy: http://illusion.scene360.com
|
ಆದರೆ ಅವಳ ಆರೋಪವನ್ನೆಲ್ಲಾ ಸಾರಾಸಗಟಾಗಿ ಅಲ್ಲಗಳೆದ ಆವನು, ಅವಳನ್ನು ಮೆತ್ತಗೆ ಎದೆಗಾನಿಸಿಕೊಂಡು ಕಣ್ಣು ಮುಚ್ಚಿಕೊಂಡ. ಧ್ಯಾನಸ್ಥನ ಏಕಾಗ್ರತೆಯಿಂದ ಅವಳ ತಲೆಗೂದಲ ಘಮದ ಅಮಲು ಹತ್ತಿದಂತೆ ಆತ ಹೇಳಲಾರಂಭಿಸಿದ... “ಬೆಳ್‍ಬೆಳಗ್ಗೇನೆ ನಿನ್ನ ಎಬ್ಸೋಕೆ ಬಂದಾಗ ಇನ್ನೊಂದೈದು ನಿಮಿಷ ಮಲಗ್ತೀನಿ ಕಣೋ ಪ್ಲೀಸ್... ಅಂತಾ ಮಗು ಥರಾ ಮುಖ ಮಾಡ್ತಿಯಲ್ಲಾ? ಆವಾಗ ಕಾಣೋವಷ್ಟು ಚೆನ್ನಾಗಿ ಆ ಎಫ್.ಬಿ ಪೋಟೋದಲ್ಲಿ ಕಾಣ್ತಿಲ್ಲ ನೀನು...”
ಕೊಸರಿಕೊಂಡ ಅವಳ ತುಟಿಯಿಂದ ಮತ್ತೊಂದು ಆಕ್ಷೇಪ ಹೊರಡುವ ಮುನ್ನ ಮತ್ತಷ್ಟು ಬಿಗಿಯಾಗಿ ಅವಳನ್ನಪ್ಪಿದ ಅವನ ಮಾತು ಮುಂದೆ ಸಾಗಿತು... “ಎಬ್ಬಿಸೋಕೆ ಬಂದ ನನ್ನನ್ನೂ ಎಳ್ಕೊಂಡು, ಜಸ್ಟ್ 5 ಮಿನಿಟ್ಸ್ ಅಂತಾ ಮತ್ತರ್ಧ ಗಂಟೆ ಎದೆ ಮೇಲೆ ತಲೆ ಇಟ್ಕೊಂಡು ಮಲಗ್ತೀ ಅಲ್ವಾ? ಆಗ ನಿನ್ನ ಮುಖದಲ್ಲಿ ಬೇಗ ಏಳೋ ನನ್ನ ಮತ್ತೆ ಮಲಗಿಸಿದ ಖುಷಿ ಇರುತ್ತಲ್ವಾ? ಅವಾಗಿನ ಕ್ಯೂಟ್‍ನೆಸ್ ಆ ಎಫ್.ಬಿ ಪೋಟೋದಲ್ಲಿಲ್ಲಾ ಬಿಡು...” ಎಂದು ಮತ್ತಷ್ಟು ತನ್ಮಯತೆಯಿಂದ ಅವಳನ್ನು ಬಳಸಿಕೊಂಡ.
ಅಷ್ಟರಲ್ಲಿ ಅವನ ಮಾತಿನ ಪ್ರತೀ ಶಬ್ಧವನ್ನು ಅನುಭವಿಸುತ್ತಾ ಮೈ ಮರೆತಿದ್ದ ಆಕೆಯ ಹುಸಿಗೋಪ ಮಾಯವಾಗಿತ್ತು. ಆತ ಇನ್ನೇನೋ ಹೇಳುವ ಮುನ್ನ ಬಾಹುಬಂಧನದಿಂದ ಬಿಡಿಸಿಕೊಂಡು ಅವನನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳ ಮುಖದಲ್ಲಿ ಮುಂಜಾನೆಯ ಸೌಂದರ್ಯ ಮತ್ತೆ ಅರಳಿತ್ತು. ಆ ಕ್ಷಣದಲ್ಲಿ ಅವರಿಬ್ಬರ ಕಣ್ಣಲ್ಲೂ ಪ್ರತಿಫಲಿಸುತ್ತಿದ್ದುದು ಅವಳದೇ ಸೌಂದರ್ಯ.
“ಆ ಪೋಟೋ...” ಎಂದು ಹೇಳಲು ಹೊರಟ ಆತನ ಬಾಯಿಂದ ಹೊರಟ ವಾಕ್ಯಗಳು ಅವಳ ಕಿವಿ ತಲುಪುವ ಬದಲು ಮುತ್ತಾಗಿ ಆಕೆಯ ಹೃದಯ ತಲುಪಿತು...
ಇತ್ತ ಮೊಬೈಲ್ ನೋಟಿಫಿಕೇಷನ್ ಅವಳ ಪೋಟೋಗೆ ಮತ್ತಷ್ಟು ಲೈಕ್ಸ್ ಬಂದ ಸೂಚನೆ ನೀಡುತ್ತಲೇ ಇತ್ತು...
---
#filchfiction #firstpage #fantacy #abstractstories