Thursday 12 February 2009

ಪ್ರೇಮ ಲಹರಿ

''ಲಹರಿ... ಮೋಹ ಲಹರಿ...
ನನ್ನಾ... ಮನವ ಸವರಿ...

ಮೌನ
ಮುರಿದಾಗಿದೆ..
ಮಾತು ಬರದಾಗಿದೆ...

ಹೇಳು ಬರಲೇನು ನಿನ್ನೊಂದಿಗೆ...
''

ದ್ದಾಗಿನಿಂದ ಕಾಡುತ್ತಿದ್ದ ಹಾಡನ್ನು ಗುನುಗುನಿಸುತ್ತ ಹೊರ ಬಂದ ನಾನು ಯಾವುದೋ ಲಹರಿಯಲ್ಲಿ ಕಳೆದು ಹೋಗಿದ್ದೆ. ಅದೇ ಗುಂಗಿನಲ್ಲಿ ಸ್ನಾನ ಮುಗಿಸಿ, ಹೊರಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ನಿತ್ಯದಂತೆ ಕಣ್ಣು ಫ್ರಿಜ್ ಮೇಲೆ ತಣ್ಣಗೆ ಕುಳಿತಿದ್ದ ಪುಟ್ಟ ಕ್ಯಾಲೆಂಡರ್'ನತ್ತ ಸರಿಯಿತು. ಕೆಂಪು ಇಂಕ್‌ನಲ್ಲಿ ಗುರುತುಮಾಡಿದ್ದ ದಿನಾಂಕವನ್ನು ನೋಡುತ್ತಿದ್ದಂತೆಯೇ ಮೈಮನಗಳಲ್ಲಿ ಪುಳಕ. ಅದು ಫೆಬ್ರುವರಿ 14. ಪ್ರೇಮಿಗಳ ದಿನ... ಅಂದರೆ ಮೂರು ವರ್ಷದ ಹಿಂದೆ ಇದೇ ದಿನದಂದು ನಾನವಳನ್ನು ನೋಡಿದ್ದು. ಸ್ವಪ್ನಾ... ಹೆಸರನ್ನು ನೆನೆದೊಡನೇ ಮೈಮನಸ್ಸುಗಳಲ್ಲಿ ರೋಮಾಂಚನ ಹೊಯ್ದಾಡತೊಡಗಿತು. ಸ್ವಪ್ನಾಳನ್ನು ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಿದ್ದಂತೆಯೇ ತುಟಿಯಂಚಿನಲ್ಲಿ ಕಿರುನಗೆಯೊಂದು ಅರಳಿತು. ಅದೊಂದು ಆಕಸ್ಮಿಕ ಭೇಟಿ. ಅಥವಾ ಒಂದು ಸಣ್ಣ ಅಪಘಾತ.
***
ಕಾಫೀ ಡೇ ಎದುರು ಕಾರು ನಿಲ್ಲಿಸಿ, ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮುಂದೆ ಸ್ಕೂಟಿಯಲ್ಲಿ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಹುಡುಗಿ ಕಣ್ಣಿಗೆ ಬಿದ್ದಳು. ಅರೆ! ಇದೇನು... ಆಕೆ ನನ್ನ ಕಾರಿನತ್ತಲೇ ಬರುತ್ತಿದ್ದಾಳೆ. ಬರೋ ರೀತಿ ನೋಡಿದರೆ ಪಕ್ಕಾ ’ಎಲ್ ಬೋರ್ಡ್’ ಥರಾ ಇದೆ.
"ಹೇಯ್! ಸ್ಟಾಪ್..." ಎಂದು
ನಾನು ಕೂಗುಷ್ಟರಲ್ಲಿ, 'ದಢ್!!!!!!!!!!!' ಎಂಬ ಸದ್ದು ಕೇಳಿಸಿತು.
ಕಣ್ಣು ಮುಚ್ಚಿ ಕಣ್ಣು ತೆರೆ
ಯುವಷ್ಟರಲ್ಲಿ ಎದುರಿಗಿದ್ದ ಸ್ಕೂಟಿ ಮಾಯ. ಏನಾಯ್ತು ಎಂದು ಇಳಿದು ನೋಡಿದರೆ ಮುಂದೆ ಬಿದ್ದಿದ್ದ ಸ್ಕೂಟಿ ಕಾರಿಗೆ ಮುತ್ತಿಕ್ಕುತ್ತಿತ್ತು. ಕಾರಿಗೆ ಡ್ಯಾಮೇಜ್ ಆಗಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ನಾನು ಅದರ ಒಡತಿಯತ್ತ ನೋಡಿದ್ದು. ಸ್ಕೂಟಿಯ ಭಾರ ತಾಳಲಾರದೆ, ಕೊಸರಾಡುತ್ತಿದ್ದ ಆಕೆಯನ್ನು ನೋಡುವಾಗ ನಗು ಬಂದರೂ ತಡೆದುಕೊಂಡೆ. ಸ್ಕೂಟಿಯನ್ನು ಮೇಲೆತ್ತಿ ಅವಳತ್ತ ಕೈಚಾಚಿದೆ. ನನ್ನ ಕೈಹಿಡಿದುಕೊಂಡು, ಕಷ್ಟಪಟ್ಟು ಎದ್ದು ನಿಂತ ಆಕೆಯ ಮೊಗದಲ್ಲಿ ಒಂದು ಸಣ್ಣ ಭಯ ಮಿಶ್ರಿತ ಗೊಂದಲ.
"ಐ ಯಾಮ್... ಸೋ... ಸ್ಸಾರಿ. ಬ್ರೇಕ್ ಸರಿಯಾಗಿ ಹಿಡಿಯಲಿಲ್ಲ..." ಎಂಬ ವಾಕ್ಯಗಳನ್ನು ಪ್ರಯಾಸದಿಂದ ಉಸುರಿದ ಆಕೆಯ ಮೊಗ ಭಯದಿಂದ ಕೆಂಪಾಗಿತ್ತೋ ಅಥವಾ ನಾಚಿಕೆಯಿಂದ ರಂಗೇರಿತ್ತೋ ನನಗೆ ತಿಳಿಯಲಿಲ್ಲ. ಆದರೆ ತುಂಟಾಟವಾಡಿ ಅಮ್ಮನ ಕೈಯಲ್ಲಿ ಸಿಕ್ಕಿಹಾಕಿಕೊಂಡ ಪುಟ್ಟ ಹುಡುಗಿಯಂತೆ ನಿಂತಿದ್ದ ಆಕೆಯನ್ನು ಬೈಯ್ಯುವ ಉದ್ದೇಶ ಮಾತ್ರ ಮಾಯವಾಗಿತ್ತು.
"ಇಟ್ಸ್ ಓಕೆ. ನೀವು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ್ರಿ ಸರಿ. ಆದ್ರೆ ರಸ್ತೆಯಲ್ಲಿ ಓಡಾಡ್ತೀರೋ ಇನ್ಯಾವುದಾದ್ರೂ ವಾಹನಕ್ಕೆ ಡಿಕ್ಕಿ ಹೊಡೆದಿದ್ರೆ, ಇಷ್ಟು ಹೊತ್ತಿಗೆ ಸ್ಸಾರಿ ಕೇಳೋ ಸ್ಥಿತಿಯಲ್ಲಿ ನೀವು ಇರುತ್ತಿರಲಿಲ್ಲ. ಸ್ಕೂಟಿಯಲ್ಲಿ ಓಡಾಡುವಾಗ ಕೊಂಚ ಎಚ್ಚರಿಕೆಯಿಂದಿದ್ದರೆ ಒಳ್ಳೇದು. ಮನೆಯಿಂದ ಹೊರಡೋ ಮುಂಚೆ ಗಾಡಿ ಚೆಕ್ ಮಾಡಿಕೊಳ್ಳಬಾರದೆ...?" ಎಂದು ಸೌಮ್ಯವಾಗಿ ಹೇಳಿದಾಗ ಆಕೆಯ ಮುಖ ಮತ್ತಷ್ಟು ಕೆಂಪಾಯಿತು. ಈ ಬಾರಿ ಅದು ನಾಚಿಕೆಯಿಂದಲೇ ಇರಬೇಕು.
ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ, "ಅಯ್ಯಯ್ಯೋ! ಏನ್ರೀ ಇದು. ಡಿಕ್ಕಿ ಹೊಡೆದು ಏನಾದ್ರೂ ಡ್ಯಾಮೇಜ್ ಮಾಡ್ತೀರಾ. ಗಲಾಟೆ ಮಾಡಿ, ಸ್ವಲ್ಪ ಹೆಚ್ಚೇ ಕಾಸು ಕಿತ್ಕೊಂಡು ಸಾಯಂಕಾಲ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡೋಣಾ ಅಂತ ಪ್ಲಾನ್ ಹಾಕ್ಕೊಂಡಿದ್ರೆ ಕಾರಿಗೇನೂ ಆಗಿಲ್ವಲ್ರೀ. ನನ್ನ ಪಾರ್ಟಿ ಪ್ಲಾನ್ ಎಲ್ಲಾ ಹಾಳಾಗೋಯ್ತು..." ಎಂದು ಹುಸಿಗೋಪದಿಂದ ಹೇಳಿದರೆ, ನಗುವ ಸರದಿ ಅವಳದಾಯ್ತು.
"ಐಯಾಮ್... ರಿಯಲಿ... ಸ್ಸಾರಿ. ಬ್ರೇಕ್..." ಎಂದು ಮತ್ತೊಮ್ಮೆ ಉಲಿಯುತ್ತಿದ್ದ ಆಕೆಯ ಮಾತುಗಳಿಗೆ ಅರ್ಧದಲ್ಲೇ ಬ್ರೇಕ್ ಹಾಕಿ, "ನಿಮಗೆ ಏನೂ ಆಗಿಲ್ಲ ತಾನೆ?" ಎಂದೆ.
"ಇಲ್ಲಾ. ನನಗೇನೂ ಆಗಿಲ್ಲ. ನಿಮಗೆ?" ಎಂದು ಮರುಪ್ರಶ್ನೆ ಎಸೆದ ಆಕೆಯ ಮುಖದಲ್ಲಿ ಶುದ್ಧ ಮಗುವಿನ ಮುಗ್ಧತೆ.
ಈಗಂತೂ ನನಗೆ ನಗು ತಡೆಯಲಾಗಲಿಲ್ಲ. "ಅಲ್ಲಾ ಕಣ್ರೀ. ಸ್ಕೂಟಿಯಲ್ಲಿ ಬಂದು ಡಿಕ್ಕಿ ಹೊಡೆದಿದ್ದು ನೀವು. ನಿಮಗೇ ಏನೂ ಆಗಿಲ್ಲ ಅಂದ ಮೇಲೆ ಕಾರಿನೊಳಗಿದ್ದ ನನಗೇನಾಗುತ್ತೆ" ಎಂದು ನಗುವನ್ನು ತಡೆದುಕೊಳ್ಳುವ ವಿಫಲ ಯತ್ನ ಮಾಡಿದೆ. ಪಾಪ! ಆ ಹುಡುಗಿಯ ಕೆನ್ನೆ ಮತ್ತಷ್ಟು ರಂಗೇರಿತು. ಆಗಷ್ಟೆ ಆಕೆಯನ್ನು ನಾನು ಸರಿಯಾಗಿ ಗಮನಿಸಿದ್ದು. ತಿಳಿ ಹಸಿರು, ಕಡುನೀಲಿ ಮಿಶ್ರಿತ ಚೂಡಿದಾರ್‌ನಲ್ಲಿ ಆಕೆಯ ಗೌರವರ್ಣ ಮಿಂಚುತ್ತಿತ್ತು. ಗಾಳಿಯಲ್ಲಿ ಲಾಸ್ಯವಾಡುತ್ತಿದ್ದ ಮುಂಗುರುಳು. ನೀಳ ಮೂಗು. ಓಹ್! ಗಿಣಿ ಮೂಗು ಎಂದರೆ ಇದೇ ಇರಬೇಕು. ಗೊಂದಲ, ನಾಚಿಕೆ ಹಾಗೂ ಮುಗ್ಧತೆ ಇವೆಲ್ಲವೂ ಮೇಳೈಸಿದಂತಿದ್ದ ಆ ಕಣ್ಣುಗಳಂತೂ ಸ್ನಿಗ್ಧ ಸೌಂದರ್ಯದ ಚಿಹ್ನೆಗಳಂತಿದ್ದವು. ಅರೆ ಇದೇನಿದು... ಮತ್ತದೇ ಹಳೆಯ ಪದಗಳನ್ನೇ ಬಳಸಿ ಈಕೆಯನ್ನು ವರ್ಣಿಸುತ್ತಿದ್ದೇನಲ್ಲಾ ಎಂದು ಒಂದು ಕ್ಷಣ ಅನಿಸಿದರೂ, ಯಾಕೋ ಹೊಸ ಶಬ್ಧಗಳನ್ನು ಕಟ್ಟಿ ಆಕೆಯನ್ನು ಬಣ್ಣಿಸಲು ಸಾಧ್ಯವಾಗಲಿಲ್ಲ... ನನ್ನಲ್ಲಿದ್ದ ಪದಗಳೆಲ್ಲಾ ಮುಗಿದುಹೋದವೇ?! ಎಂಬ ಅಳುಕು ಕಾಡತೊಡಗಿತು. ಏನೋ ಗೊಂದಲ...
'ಆ ಕಣ್ಣುಗಳು...' ಇನ್ನೇನು ಆಕೆಯ ಸೌಂದರ್ಯೋಪಾಸನೆಯಲ್ಲಿ ಕಳೆದುಹೋಗಬೇಕು ಎನ್ನುವಷ್ಟರಲ್ಲಿ ಆಕೆ ನಿಧಾನಕ್ಕೆ ಸ್ಕೂಟಿಯನ್ನು ಹತ್ತಿದಳು. ಇನ್ನು ರಸ್ತೆಯಲ್ಲಿ ನಿಂತು ಇತರರಿಗೆ ಪುಕ್ಕಟೆ ಮನೋರಂಜನೆ ಒದಗಿಸುವುದು ಬೇಡ ಎಂದು ನಾನೂ ಕಾರಿನತ್ತ ನಡೆದೆ.
ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, "ನಿಮ್ಮ ಪಾರ್ಟಿ ಪ್ಲಾನ್ ಹಾಳು ಮಾಡೋಕೆ ನಂಗ್ಯಾಕೋ ಇಷ್ಟ ಆಗ್ತಿಲ್ಲಾ. ನಿಮಗೆ ಅಭ್ಯಂತರ ಇಲ್ಲಾಂದ್ರೆ ಇಲ್ಲೇ ಒಂದು ಕಫ್ ಕಾಫಿ ಕುಡಿಯೋಣ್ವಾ" ಎಂದ ಆಕೆಯ ಕಣ್ಣುಗಳಲ್ಲಿ ತುಂಟ ನಗು. ಬೇಡವೆಂದು ನಿರಾಕರಿಸಲು ನನ್ನ ಬಳಿ ಕಾರಣಗಳಿರಲಿಲ್ಲ.
ಮುಂದಿನ 5 ನಿಮಿಷದಲ್ಲಿ ಕಾಫಿ ಡೇಯ ಸೌತ್ ಕಾರ್ನರ್ ಟೇಬಲ್ ಮೇಲೆ ನಮ್ಮಿಬ್ಬರ ಕಾಫಿ ಕಪ್‌ನಿಂದ ಹಬೆಯಾಡುತ್ತಿತ್ತು.
***
"ಆದಿ... ಇನ್ನೂ ರೆಡಿಯಾಗಿಲ್ವಾ?" ಎಂದು ನನ್ನ ಪತ್ನಿ ಕರೆದಾಗಲೇ ನಾನು ಮೂರು ವರ್ಷದ ಹಿಂದಿನ ನೆನಪಿನಿಂದ ವಾಸ್ತವ ಪ್ರಪಂಚಕ್ಕೆ ಮರಳಿದ್ದು. ಮಹಡಿಯಿಂದ ನಿಧಾನವಾಗಿ ಇಳಿದು ಬರುತ್ತಿದ್ದ ನನ್ನಾಕೆಯನ್ನು ನೋಡಿದೆ. ಆಗಷ್ಟೇ ಸ್ನಾನ ಮುಗಿಸಿದ್ದರಿಂದ ಆಕೆಯ ನೀಳ ಕೇಶರಾಶಿಯಿಂದ ನೀರು ತೊಟ್ಟಿಕ್ಕುತ್ತಿತ್ತು. ಕಡುಗೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಂತದ ಗೊಂಬೆ. ಸ್ನಿಗ್ಧ ಸೌಂದರ್ಯ ತುಂಬಿ ತುಳುಕುತ್ತಿದ್ದ ಆ ಕಣ್ಣುಗಳು. ಹೌದು ಅವೇ ಕಣ್ಣುಗಳು. ಅವೇ ಅಲ್ಲವೆ, ಪ್ರಥಮ ಭೇಟಿಯಲ್ಲೇ ನನ್ನನ್ನು ಸಂಪೂರ್ಣ ಶರಣಾಗತನಾಗುವಂತೆ ಮಾಡಿದ್ದು. ‘ಕಾಫಿ ಡೇ’ಯಲ್ಲಿ ನನ್ನಲ್ಲಿದ್ದ ಎಲ್ಲಾ ಧೈರ್ಯವನ್ನು ಒಗ್ಗೂಡಿಸಿ ಸ್ವಪ್ನಾಳಿಗೆ ಪ್ರಪೋಸ್ ಮಾಡುವಂತೆ ಪ್ರೇರೆಪಿಸಿದ್ದು. ಅಲ್ಲಿಂದ ಏನೂ ಹೇಳದೆ ಗಾಬರಿಯಿಂದ ಎದ್ದುಹೋದ ಸ್ವಪ್ನಾಳನ್ನು ಬಿಡದೇ ಬೆನ್ನುಹತ್ತಿ, ಕಾಡಿಸಿದ ನನ್ನ ಪ್ರೀತಿಗೆ ಒಪ್ಪಿಗೆಯ ಮುದ್ರೆ ಒತ್ತಿದ್ದು ಸಹ ಅವೇ ಕಣ್ಣುಗಳಲ್ಲವೆ... ಅಬ್ಬಾ! ನೆನೆಸಿಕೊಂಡರೆ ಎಲ್ಲಾ ಕನಸಿನಲ್ಲಿ ನಡೆದಂತಿದೆ. ಆದರೆ ಅದೇ ಕನಸು ಇಂದಿನ ವಾಸ್ತವ. ಈಗ ಸ್ವಪ್ನಾ ನನ್ನ ಅರ್ಧಾಂಗಿ. ಎರಡು ವರ್ಷಗಳ ಸುಧೀರ್ಘ ಪ್ರಯತ್ನದ ಬಳಿಕ ಅವಳ ಪ್ರೀತಿಯನ್ನು ಗೆದ್ದುದರ ಫಲವಾಗಿ ನನಗೆ ಸಿಕ್ಕ ಉಡುಗೊರೆ ನನ್ನ ಸ್ವಪ್ನಾ...
"ಹ್ಞೂಂ! ಮತ್ತೆ ಕನಸಲ್ಲಿ ಕಳೆದುಹೋದ್ಯಾ" ಎಂದು ನಗುತ್ತಾ ನನ್ನ ಬಳಿ ಬಂದ ಸ್ವಪ್ನಾ ಮೃದುವಾಗಿ ತಲೆ ನೇವರಿಸಿದಳು.
"ಹಾಗೇನಿಲ್ಲಾ... ಮತ್ತೆ ‘ಕಾಫಿ ಡೇ’ ಪ್ರಪೋಸಲ್ ನೆನಪಿಸಿಕೊಳ್ತಿದ್ದೆ ಅಷ್ಟೇ" ಎಂದು ಸ್ವಪ್ನಾಳನ್ನು ನನ್ನತ್ತ ಸೆಳೆದುಕೊಂಡೆ. ನನ್ನ ಹಿಡಿತದಿಂದ ಬಿಡಿಸಿಕೊಂಡು, ಮೆತ್ತಗೆ ಕಿವಿಹಿಂಡಿದ ಆಕೆ, "ಇವತ್ತು ನಮ್ಮ ಮದುವೆ ಆನಿವರ್ಸರಿ ಅನ್ನೋದು ನೆನಪಿದೆ ತಾನೆ. ಮೊದಲು ಮರ್ಯಾದೆಯಿಂದ ದೇವಸ್ಥಾನಕ್ಕೆ ನಡಿ. ಉಳಿದಿದ್ದೆಲ್ಲಾ ಆಮೇಲೆ..." ಎಂದು ನಗುತ್ತಾ ಕಾರಿನತ್ತ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು, "ಅಲ್ಲಿಂದ ನೇರವಾಗಿ ‘ಕಾಫಿ ಡೇ’ಗೆ ಹೋಗೋಣ. ಅಲ್ಲಿ ಸೌತ್ ಕಾರ್ನರ್ ಟೇಬಲ್ ಇಂದು ನಮಗಾಗಿ ರಿಸರ್ವ್ ಆಗಿದೆ" ಎಂದು ಮೆತ್ತಗೆ ಅವಳತ್ತ ಬಾಗಿದೆ. ಸ್ವಪ್ನಾಳ ಕೆನ್ನೆ ಕೆಂಪಾಯ್ತು. ಆದರೆ ಈ ಬಾರಿ ಅದು ನಾಚಿಕೆಯಿಂದಲೋ ಅಥವಾ ನಾನಿತ್ತ ಸಿಹಿ ಮುತ್ತಿನಿಂದಲೋ ಎಂಬುದು ತಿಳಿಯಲಿಲ್ಲ...

ಕಲೆ : ಪ್ರಕಾಶ್ ಶೆಟ್ಟಿ ಉಳೆಪಾಡಿ