Wednesday 29 April 2009

ಶ್ರೀನಿವಾಸ ಕಲ್ಯಾಣ ಮತ್ತು ಚಿಂತಾಮಣಿ ಪ್ರಸಂಗ

ಲವರಂತೆ ನನಗೂ ನನ್ನ ಹೈಸ್ಕೂಲ್ ಜೀವನ ಮರೆಯಲಾಗದ ನೆನಪುಗಳ ಬುತ್ತಿ. ಅತ್ತ ಸಂಪೂರ್ಣ ಪ್ರೌಢ ವಯಸ್ಸೂ ಅಲ್ಲ, ಇತ್ತ ಮರ್ಕಟ ಬುದ್ಧಿಗೇನೂ ಕಮ್ಮಿ ಇಲ್ಲ ಎಂಬಂತಿದ್ದ ಕಾಲಘಟ್ಟವದು. ಆಗಷ್ಟೇ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್‌ಗೆ ಭಡ್ತಿ ಪಡೆದು ಒಂದು ವರ್ಷ ಸರಿದುಹೋಗಿತ್ತು. ನಮ್ಮೊಂದಿಗೆ ಹೈಸ್ಕೂಲ್‌ನಲ್ಲಿ ಕೈಗೊಂಡಿದ್ದ ಬಹುವಿಧದ ಕಿತಾಪತಿ ಕಾರ್ಯಗಳ ಕಾರಣ ಶಿಕ್ಷಕರು ಸಹಸ್ರ ನಾಮಾರ್ಚನೆ ಸಹಿತವಾಗಿದ ನೀಡಿದ್ದ ಹಲವು 'ಬಿರುದು'ಗಳನ್ನು ಹೊಂದಿದ್ದ ತರ್ಲೆ ಬಳಗವೂ ಇತ್ತು. ಚಿಂತಾಮಣಿ (ಗಣಿತದ ಕಾಗುಣಿತಗಳನ್ನು ತನ್ನದೇ ವಿಧಾನದಲ್ಲಿ ಬಿಡಿಸುತ್ತಿದ್ದ ಮೇಧಾವಿ ನಿತ್ಯಾನಂದನಿಗೆ ನಾವಿಟ್ಟಿದ್ದ ಅಡ್ಡ ಹೆಸರಿದು), ನಾರಾಯಣ, ಶಿವು, ರಾಜೇಶ್, ಸತೀಶ್... ಹೀಗೆ ಹಲವು ಶಾಶ್ವತ ಸದಸ್ಯರನ್ನು ಹೊಂದಿದ್ದ ಆ ತರ್ಲೆ ಬಳಗದಲ್ಲಿ ನಾನೂ ಕೆಲವೊಮ್ಮೆ ಅತಿಥಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೆ.

ಇಂತಿಪ್ಪ ಈ ಗುಂಪಿಗೆ ನಮ್ಮದೇ ತರಗತಿಯಲ್ಲಿದ್ದ ಒಂದು ಹುಡುಗಿಯನ್ನ ಕಂಡರಾಗುತ್ತಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಈ ತರ್ಲೆ ಬಳಗ ಮಾಡುವ ಎಲ್ಲಾ ಆವಾಂತರಗಳನ್ನು ವರದಿಯನ್ನು ಚಾಚೂ ತಪ್ಪದೆ ಕ್ಲಾಸ್ ಟೀಚರ್‌ಗೆ ಸಲ್ಲಿಸಿ, ಅವರಿಂದ ಪ್ರತಿದಿನ ಮಹಾಪೂಜೆ ಮಾಡಿಸುತ್ತಿದ್ದ ಆಕೆಯ ಮೇಲೆ ಇವರಿಗೆ ಸಿಟ್ಟು ಬರುವುದು ಸಹಜ ತಾನೇ... ಪಾಪ! ಇಷ್ಟಕ್ಕೂ ಅವಳದೇನೂ ತಪ್ಪಿರಲಿಲ್ಲ ಬಿಡಿ. ತರಗತಿಯ ಮಾನಿಟರ್ ಆಗಿ, ಶಿಸ್ತು ಕಾಪಾಡಿಕೊಳ್ಳುವುದಕ್ಕೆ ಆಕೆ ಅಷ್ಟಾದರೂ ಮಾಡದಿದ್ದರೆ ಹೇಗೆ? ಆದರೆ ಈ ಮಾತು ನಮ್ಮ ಮೊಂಡು ಬುದ್ಧಿಗೆ ಎಲ್ಲಿ ತಿಳಿಯಬೇಕು. ಹೇಗಾದರೂ ಮಾಡಿ ಒಂದು ದಿನ ಆಕೆಗೆ ನಮ್ಮ ಕ್ಲಾಸ್ ಟೀಚರ್ ಕೈಯಿಂದ ಮಹಾಮಂಗಳಾರತಿ ಮಾಡಿಸಬೇಕು ಎಂಬ ಭೀಷ್ಮ ಪ್ರತಿಜ್ಞೆಯನ್ನು ತರ್ಲೆ ಬಳಗ ಮಾಡಿಯೇಬಿಟ್ಟಿತ್ತು. ಅಂತಹ ಒಂದು ಸಂದರ್ಭಕ್ಕಾಗಿ ಹೊಂಚು ಹಾಕಿ ಕಾಯುತ್ತಿತ್ತು. ಆದರೆ ಇದ್ಯಾವುದರ ಪರಿವೇ ಇಲ್ಲದ ಆಕೆ ಮಾತ್ರ ತನ್ನ ಮಾನಿಟರಿಂಗ್ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಳು. ಈ ನಡುವೆ ನಮ್ಮ ತರ್ಲೆ ಬಳಗದ ಪ್ರತಿಜ್ಞೆ ನೆರವೇರುವ ದಿನ ಬಂದೇ ಬಿಟ್ಟಿತು...

"ಇಲ್ಲ... ಇನ್ನು ನನ್ನಿಂದ ಸಾಧ್ಯವಿಲ್ಲ. ಇವತ್ತು ಒಂದು ಕೈ ನೋಡೇ ಬಿಡ್ತೀನಿ..." ಎನ್ನುತ್ತಾ ಅವಸವರಸವಾಗಿ ನಾರಾಯಣ ಕ್ಲಾಸ್ ರೂಮ್‌ಗೆ ನುಗ್ಗಿದಾಗಲೇ ಏನೋ ಎಡವಟ್ಟಾಗಿದೆ ಅಂತ ನಮಗೆಲ್ಲಾ ಗೊತ್ತಾಯ್ತು. ಕೊನೆ ಬೆಂಚ್‌ನಲ್ಲಿ ಕುಳಿತು ಚಿಂತಾಮಣಿ ಮನೆಯಿಂದ ತಂದಿದ್ದ ನೆಲಗಡಲೆ ಸವಿಯುತ್ತಿದ್ದ ನಾವು ಒಂದು ಕ್ಷಣ ನಮ್ಮ ಕೈ-ಬಾಯಿಗಳಿಗೆ ವಿರಾಮ ನೀಡಬೇಕಾಯ್ತು. ಕೆಂಪಿಟ್ಟಿದ್ದ ನಾರಾಯಣನ ಮುಖ ನೋಡಿ, ಚಿಂತಾಮಣಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ಅರ್ಥವಾಯ್ತು. ವಿಚಾರಿಸಿದಾಗ, ಬೆಳಿಗ್ಗೆ ನಮ್ಮ ಮಾನಿಟರ್ ಆ ವಾರದಲ್ಲಿ ತರ್ಲೆ ಬಳಗ ಮಾಡಿದ ಕಿತಾಪತಿಗಳ ಪಟ್ಟಿಯನ್ನು ಕ್ಲಾಸ್ ಟೀಚರ್‌ಗೆ ಕೊಟ್ಟಿರುವುದ್ದಾಗಿಯೂ, ಅವುಗಳಲ್ಲಿ ಶ್ರೀನಿವಾಸ ಮಾಡಿದ ಕಲ್ಯಾಣ ಕಾರ್ಯಗಳ ಸಂಖ್ಯೆ ಆಗಷ್ಟೇ ಮುಗಿದಿದ್ದ ಕ್ಲಾಸ್ ಟೆಸ್ಟ್‌ನಲ್ಲಿ ಆತ ಪಡೆದ ಅಂಕಗಳಿಗಿಂತ ಹೆಚ್ಚಾಗಿದ್ದುದಾಗಿಯೂ ಹಾಗೂ ಆ ಕಾರಣದಿಂದ ಮೇಡಂ ಸಿಟ್ಟಾಗಿ, ಮಧ್ಯಾಹ್ನದ ಲಂಚ್ ಅವರ್‌ನಲ್ಲಿ ಆತನನ್ನು ಸ್ಟಾಫ್ ರೂಮ್‌ಗೆ ಕರೆದು ಅರ್ಧ ಗಂಟೆ 'ಸ್ಷೆಷಲ್ ಕ್ಲಾಸ್' ತೆಗೆದುಕೊಂಡಿರುವುದಾಗಿಯೂ ತಿಳಿದು ಬಂತು. ಇಷ್ಟು ಹೇಳುವಷ್ಟರಲ್ಲಿ ಮಧ್ಯಾಹ್ನ ನಮ್ಮೊಂದಿಗೆ ಊಟಕ್ಕೆ ಬರದ ಶ್ರೀನಿ ಎಲ್ಲಿ ಹೋಗಿದ್ದ ಎಂಬ ವಿಚಾರ ನಮಗೆಲ್ಲಾ ಸ್ಪಷ್ಟವಾಯಿತು.

"ಸರಿ, ಆದದ್ದು ಆಗಿ ಹೋಯ್ತು. ಇದೆಲ್ಲಾ ನಮಗೇನೂ ಹೊಸದೇ? ತಗೋ ಕಡ್ಲೆ ತಿನ್ನು..." ಎಂದು ಚಿಂತಾಮಣಿ ತನ್ನ ಎಂದಿನ ಕೂಲ್ ಸ್ಟೈಲ್‌ನಲ್ಲಿ ಹೇಳಿದರೂ ಶ್ರೀನಿ ಕೇಳಲಿಲ್ಲ. ಪ್ರಾಯಶಃ 'ಸ್ಷೆಷಲ್ ಕ್ಲಾಸ್' ಸಖತ್ ಸ್ಟ್ರಾಂಗ್ ಆಗಿತ್ತು ಎಂದು ಕಾಣುತ್ತದೆ. "ಹೇಗಾದರೂ ಅವಳಿಗಿಂದು 'ಸ್ಪೆಷಲ್ ಕ್ಲಾಸ್' ಅಟೆಂಡ್ ಮಾಡೋದು ಎಷ್ಟು ಕಷ್ಟ ಎಂದು ತಿಳಿಯಲೇ ಬೇಕು. ಏನಾದ್ರೂ ಮಾಡು. ಇಲ್ಲಾಂದ್ರೆ ನನ್ನ ಮನಸ್ಸಿಗೆ ಸಮಾಧಾನ ಇರೋಲ್ಲ..." ಎಂದು ಮನನೊಂದು ನುಡಿದ ಶ್ರೀನಿಯ ದುಃಖ ಕಡಿಮೆ ಮಾಡಲೇಬೇಕು ಎಂಬ ಆಲೋಚನೆ ಚಿಂತಾಮಣಿಯ ತಲೆಯಲ್ಲಿ ಭದ್ರವಾಗಿ ತನ್ನ ಅಧಿಪತ್ಯ ಸ್ಥಾಪಿಸಿಬಿಟ್ಟಿತು. ಏನು ಮಾಡುವುದು ಎಂದು ಯೋಚಿಸುತ್ತಾ, ಕೈಯಲ್ಲಿದ್ದ ನೆಲಗಡಲೆಯಿಂದಲೇ ತನ್ನ ತಲೆ ಕೆರೆದುಕೊಂಡ ಚಿಂತಾಮಣಿ ತಕ್ಷಣವೇ ಯುರೇಕಾ! ಎನ್ನುತ್ತಾ ಮೇಲೆಳುವುದಕ್ಕೂ, ಲಂಚ್ ಅವರ್ ಮುಗಿದು ಮಧ್ಯಾಹ್ನದ ಪ್ರಥಮ ಕ್ಲಾಸ್‌ನ ಬೆಲ್ ಬಾರಿಸುವುದಕ್ಕೂ ಸರಿಹೋಯ್ತು. ಅಷ್ಟರಲ್ಲಿ ಲೈಬ್ರರಿಯಿಂದ ಹುಡುಗಿಯರ ದಂಡು ಕ್ಲಾಸ್‌ಗೆ ನುಗ್ಗಿತು. ಜೊತೆಯಲ್ಲೇ ನಮ್ಮ ಮಾನಿಟರ್ ಬಂದು, ಚಿಂತಾಮಣಿಯ ಕುಳಿತಿದ್ದ ಪಕ್ಕದ ಸಾಲಿನ, ಎರಡನೆಯ ಬೆಂಚ್‌ನಲ್ಲಿ ಕುಳಿತು ತಾನು ಮಾಡಿಕೊಂಡಿದ್ದ ನೋಟ್ಸ್‌ಗಳನ್ನು ಮತ್ತೊಮ್ಮೆ ಪರೀಕ್ಷಿಸಿ ತನ್ನ ಬ್ಯಾಗ್‌ಗೆ ಸೇರಿಸಿದಳು. ಅದಾದ ಐದು ನಿಮಿಷಕ್ಕೇ ಕ್ಲಾಸ್‌ಗೆ ಬಂದ ಮೇಡಂ ಮುಖದಲ್ಲಿ ಇನ್ನೂ ಸಿಟ್ಟಿನ ಛಾಯೆಯಿತ್ತು. ನಮಗೆಲ್ಲಾ ಹಿಂದಿನ ದಿನ ಜಿಯಾಗ್ರಫಿ ಸರ್ ಪಾಠ ಮಾಡುವಾಗ ವಿವರಿಸಿದ್ದ, ಸ್ಫೋಟಿಸಲು ಸಿದ್ಧವಾಗಿರುವ ಜ್ವಾಲಾಮುಖಿಯ ನೆನಪಾಯ್ತು. ಇವತ್ತೇನಾದರೂ ತರ್ಲೆ ಮಾಡಿದ್ರೆ ಘೋರ ಶಿಕ್ಷೆ ಖಂಡಿತಾ ಎಂದರಿತ ನಾವು, ಮೇಡಂ ಮುಖ ನೋಡುವ ಧೈರ್ಯ ಸಾಲದೆ ಪುಸ್ತಕದೊಳಗೆ ಮಸ್ತಕವನ್ನು ಹುದುಗಿಸಿ ಪಾಠ ಕೇಳುವ ಸೋಗು ಹಾಕಲಾರಂಭಿಸಿದೆವು.

ಹೀ
ಗೆ 15 ನಿಮಿಷ ಸರಿದು ಹೋಯ್ತು. ತರಗತಿಯಲ್ಲೆಲ್ಲಾ ಓಡಾಡುತ್ತಾ ಪಾಠ ಮಾಡುವುದನ್ನು ರೂಢಿಸಿಕೊಂಡಿದ್ದ ಮೇಡಂ, ಮಾನಿಟರ್ ಕುಳಿತಿದ್ದ ಸ್ಥಳದ ಮುಂದೆ ನಿಂತು ಏಕೋ ಒಂದೆರಡು ಬಾರಿ ಕೆಮ್ಮಿದರು. ಮತ್ತೆ ಐದು ನಿಮಿಷ ಕಳೆಯಿತು. ಇದ್ದಕ್ಕಿದ್ದಂತೆ ಮೇಡಂ ಧ್ವನಿಯಲ್ಲಾದ ಬದಲಾವಣೆ ಅವರ ಸಿಟ್ಟು ಈಗಾಗಲೇ ತನ್ನ ಮಿತಿಯನ್ನು ಮೀರಿದ್ದನ್ನು ಸ್ಪಷ್ಟಪಡಿಸಿತು. ಇನ್ನೇನು... ಅವರ ಸಿಟ್ಟಿನ ಲಾವಾ ಯಾರದೋ ತಲೆಯ ಮೇಲೆ ಅಪ್ಪಳಿಸಲಿದೆ, ಬಹುಶಃ ಶ್ರೀನಿವಾಸ ಮತ್ತೇನಾದರೂ ಆವಾಂತರ ಮಾಡಿರಬೇಕು ಎಂದು ಅವನ ಕಡೆ ತಿರುಗಿದ್ದೇ ತಡ... "ವಾಣಿ..." ಎಂದು ಅಬ್ಬರಿಸಿದ ಮೇಡಂ ಆಕೆಯತ್ತ ಅಸಹನೀಯವಾಗಿ ದಿಟ್ಟಿಸುತ್ತಿರುವುದು ಕಂಡುಬಂತು. ಅರೆ... ವಾಣಿ ಅಂದರೆ ನಮ್ಮ ಮಾನಿಟರ್ ಹೆಸರು.
"ಮಾನಿಟರ್ ಆಗಿ ನೀನೇ ಡಿಸಿಪ್ಲೀನ್ ಮೈಂಟೇನ್ ಮಾಡದಿದ್ರೆ ಹೇಗೆ? ಇದೇನಾ ನೀನು ಕಲಿತಿರೋದು? ಎಂದು ಆಕೆ ಕುಳಿತಿದ್ದ ಜಾಗದತ್ತ ಬೆಟ್ಟು ಮಾಡಿ ತೋರಿಸಿ ಗುಡುಗಲು ಆರಂಭಿಸಿದರು. "ವಾಣಿ, ಇದು ಹೇಗಾಯ್ತೋ ಗೊತ್ತಿಲ್ಲ ಮೇಡಂ..." ಎಂದು ಪರಿಪರಿಯಾಗಿ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದರೂ ಅವರು ಶಾಂತರಾಗಲಿಲ್ಲ. ಇಷ್ಟಕ್ಕೂ ಮೇಡಂ ಸ್ವಭಾವವೇ ಹಾಗಿತ್ತು. ಅವರಿಗೆ ಸಿಟ್ಟು ಬಂದರೆ ದೂರ್ವಾಸ, ವಿಶ್ವಾಮಿತ್ರರೂ ನಾಚಬೇಕು.

ಷ್ಟಕ್ಕೂ ಆಕೆ ಮಾಡಿದ್ದಾದರೂ ಏನು? ಎಂದು ತಲೆಕೆರೆದುಕೊಳ್ಳುತ್ತಿರುವಾಗಲೇ ನನ್ನ ದೃಷ್ಟಿ ವಾಣಿ ನಿಂತಿದ್ದ ಜಾಗದತ್ತ ಬಿತ್ತು... ಅಲ್ಲೆಲ್ಲಾ ನೆಲಗಡಲೆ ಸಿಪ್ಪೆ ಹರಡಿತ್ತು...!! ಈಚೆ ಏನೂ ಗೊತ್ತಿಲ್ಲದಂತೆ ಕುಳಿತಿದ್ದ ಚಿಂತಾಮಣಿಯ ತುಟಿಯಂಚಿನಲ್ಲಿ ಕಂಡೂ ಕಾಣದ ನಗು... ಸಿಟ್ಟಿನಿಂದ ಕೆಂಪಾಗಿದ್ದ ಶ್ರೀನಿಯ ಮೊಗದಲ್ಲಿ ಅಚ್ಚರಿ... ಇದನ್ನೆಲ್ಲಾ ನೋಡಿದ ಮೇಲೆ ಏನು ನಡೆಯಿತು ಎಂಬುದು ಸ್ಪಷ್ಟವಾಯಿತು. ಆದರೆ ಸಿಟ್ಟಿನ ಭರದಲ್ಲಿದ್ದ ಮೇಡಂ, ತಮ್ಮ ಪ್ರಿಯ ಶಿಷ್ಯೆ ಹೀಗೆ ಕ್ಲಾಸ್‌ನಲ್ಲಿ ನೆಲಗಡಲೆ ತಿಂದು ಸಿಪ್ಪೆ ಎಸೆಯುತ್ತಾಳೆಯೇ? ಎಂದು ಆಲೋಚಿಸಲಿಲ್ಲ. ವಾಣಿಯ ಮಾನಿಟರಿಂಗ್ ನ ಬಿಸಿ ಅನುಭವಿಸಿದ್ದ ಯಾರೊಬ್ಬರೂ ನಿಜ ಹೇಳುವ ಮನಸ್ಸು ಮಾಡಲಿಲ್ಲ... ಅಂದೇ ಕೊನೆ... ವಾಣಿ ಮತ್ಯಾವತ್ತೂ ಯಾರ ಕಲ್ಯಾಣ ಕಾರ್ಯಗಳ ಕುರಿತೂ ವರದಿ ತಯಾರಿಸಲಿಲ್ಲ... ಅಷ್ಟೇ ಅಲ್ಲಾ, ಯಾರು, ಎಷ್ಟೇ ಪ್ರೀತಿಯಿಂದ ಕೊಟ್ಟರೂ ನೆಲಗಡಲೆ ಮಾತ್ರ ತಿನ್ನುತ್ತಿರಲಿಲ್ಲ.